ಕಲಬುರಗಿ : ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಬಾಮೈದುನನ ಹೆಸರು ಕೇಳಿಬಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಟ್ಟಿಂಗ್ ವಿಚಾರವಾಗಿ ಮಹಾರಾಷ್ಟ್ರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಪತ್ನಿಯ ಕಾರನ್ನು ಕೂಡ ಸೀಜ್ ಮಾಡಿದ್ದಾರೆ. ಇದು ಸ್ಥಳೀಯ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ದಿಢೀರ್ ದಾಳಿ ಸಡೆಸಿದ ಸೋಲಾಪುರ ಸಿಸಿಬಿ ಪೊಲೀಸರು, 38.44 ಲಕ್ಷ ರೂ. ನಗದು, ಎರಡು ಕಾರು, ಲ್ಯಾಪ್ಟಾಪ್, ಮೊಬೈಲ್ ಹಾಗೂ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಐಪಿಎಲ್ 2ನೆಯ ಕ್ವಾಲಿಫೈಯರ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆದಿತ್ತು ಎನ್ನಲಾಗಿದ್ದು ಖಚಿತ ಮಾಹಿತಿ ಮೇರೆಗೆ ಸೋಲಾಪುರ ಪಟ್ಟಣದಲ್ಲಿ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಚೇತನ್ ಬನ್ಸಾಲ್, ವಿಘ್ನೇಶ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ನೀಡಿದ ಸುಳಿವಿನ ಮೇರೆಗೆ ಪ್ರಕರಣದ ಬೆನ್ನತ್ತಿದ ಪೊಲೀಸರು ಕಲಬುರಗಿಗೆ ಆಗಮಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕಾರ್ಯಾಚರಣೆ ವೇಳೆ ಖಚಿತ ಮಾಹಿತಿಯೊಂದಿಗೆ ಮನೆಯೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅತುಲ್ ಶಿರಶೆಟ್ಟಿ ಹಾಗೂ ಪ್ರದೀಪ್ ಕಾರಂಜೆ ಎಂಬುವವರೆ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು.