ಕಲಬುರ್ಗಿ :ವಿಶ್ವವನ್ನೇ ನಡುಗಿಸುತ್ತಿರುವ ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಡಲು ವೈದ್ಯರು ಬಲಗೈ ಬಂಟರಂತೆ ಶುಶ್ರೂಷಕರು ಟೊಂಕಕಟ್ಟಿ ನಿಂತಿದ್ದಾರೆ. ಒಂದರ್ಥದಲ್ಲಿ ವೈದ್ಯರನ್ನೇ ಮೀರಿಸುವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ವೈದ್ಯರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲನೆ ಮಾಡಿ ಕೊರೊನಾ ಸೋಂಕಿತರನ್ನು ಗುಣಮುಖರಾಗಿಸುವಲ್ಲಿ ಇವರು ಶ್ರಮಿಸುತ್ತಿದ್ದಾರೆ.
ದೇಶದ ಮೊದಲ ಕೊರೊನಾ ಸಾವು ಸಂಭವಿಸಿದ ಕಲಬುರ್ಗಿ ಜಿಲ್ಲೆಯಲ್ಲಿ ಈವರೆಗೂ 73 ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಆರು ಜನ ಸಾವನ್ನಪ್ಪಿದ್ದು, ಕೆಲವು ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಅಂತಾರಾಷ್ಟ್ರೀಯ ಶುಶ್ರೂಷಕರ ದಿನ.. ಇವರ ಸೇವೆ ಮರೆಯದಿರೋಣ.. ಕಾಣುವ ದೇವರೇ ಇವರು..
ಕಲಬುರ್ಗಿಯ ಇಎಸ್ಐ ಹಾಗೂ ಜಿಮ್ಸ್ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗಾಗಿ ಐಸೋಲೇಷನ್ ವಾರ್ಡ್ ನಿರ್ಮಿಸಲಾಗಿದೆ. ಈ ವಾರ್ಡ್ಗಳಲ್ಲಿ ವೈದ್ಯರಾಗಲಿ, ನರ್ಸ್ ಮತ್ತು ಇತರೆ ಸಿಬ್ಬಂದಿ ಪಿಪಿಇ ಕಿಟ್ ಹಾಕಿಕೊಂಡೇ ಕೆಲಸ ಮಾಡಿಕೊಳ್ಳಬೇಕು. ಒಮ್ಮೆ ಪಿಪಿಇ ಕಿಟ್ ಹಾಕಿಕೊಂಡ ನಂತರ ಮೂರು ತಾಸುಗಳ ಕಾಲ ಅದನ್ನು ತೆಗೆಯದೇ ಕೆಲಸ ಮಾಡಬೇಕಾಗುತ್ತದೆ. ಇದೊಂದು ರೀತಿ ಯಮಯಾತನೆ.
ಮೊದಲೇ ಬಿಸಿಲಿಂದ ತತ್ತರಿಸಿರುವ ಕಲಬುರ್ಗಿಯಲ್ಲಿ ಪಿಪಿಇ ಕಿಟ್ ಹಾಕಿಕೊಂಡರೆ ಮೈತುಂಬಾ ಬೆವರು ಬಂದು, ಬೆವರ ನೀರು ಹರಿಯೋ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ನರ್ಸ್ಗಳು ಕೆಲಸ ಮಾಡುತ್ತಿದ್ದಾರೆ. ಇಎಸ್ಐ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿರುವ ಸೇವೆ ಸಲ್ಲಿಸುತ್ತಿರುವ ಆನಂದ ಬಸೂದಕರ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದಾಗಿನಿಂದಲೂ ಐಸೋಲೇಷನ್ ವಾರ್ಡ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.
ಕಲಬುರ್ಗಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರಿದ್ದಾರೆ. ಕೇವಲ 10ರಿಂದ 12 ಸಾವಿರ ರೂಪಾಯಿಗೆ ದುಡಿಯುತ್ತಿದ್ದಾರೆ. ಕಡಿಮೆ ವೇತನ ನೀಡುತ್ತಿದ್ದರೂ ಅದರ ವಿರುದ್ಧ ಚಕಾರವೆತ್ತದೆ, ಯುದ್ಧಕ್ಕೆ ಸನ್ನದ್ಧರಾದವರ ರೀತಿ ಕೊರೊನಾ ಐಸೋಲೇಷನ್ ವಾರ್ಡ್ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಕಷ್ಟಗಳ ನಡುವೆಯೂ ಕೊರೊನಾ ವಿರುದ್ಧ ಹೋರಾಡುತ್ತಿರುವ ಅವರ ಸೇವೆ ಅವಿಸ್ಮರಣೀಯ..