ಕಲಬುರಗಿ :17 ಸೋಂಕಿತರು ತಮ್ಮ ಮೊಬೈಲ್ ಸಂಖ್ಯೆ ಬದಲಾಗಿ ಪತ್ರಕರ್ತರೊಬ್ಬರ ಮೊಬೈಲ್ ನಂಬರ್ ನೀಡಿರುವ ಪ್ರಕರಣ ಶಹಬಾದ್ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಕೊರೊನಾ ತಪಾಸಣೆ ವೇಳೆ ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನೀಡಬೇಕಾಗಿರುವುದು ನಿಯಮ. ಆದರೆ, ಶಹಬಾದ್ ಪಟ್ಟಣದಲ್ಲಿ 17 ಜನರು ತಪಾಸಣೆ ವೇಳೆ ಪತ್ರಿಕೆಯ ವರದಿಗಾರ ದಾಮೋಧರ ಭಟ್ ಎಂಬುವರ ಮೊಬೈಲ್ ಸಂಖ್ಯೆ ನೀಡಿದ್ದಾರೆ.
ಆರೋಗ್ಯ ಇಲಾಖೆ, ನಗರಸಭೆ ಸಿಬ್ಬಂದಿ ಪದೇಪದೆ ಕಾಲ್ ಮಾಡಿ ನೀವು ಹೋಮ್ ಐಸೋಲೇಷನ್‌ನಲ್ಲಿದ್ದೀರಾ, ಆರೋಗ್ಯದ ಸ್ಥಿತಿಗತಿ ಹೇಗಿದೆ? ಎಂದೆಲ್ಲಾ ವಿಚಾರಿಸಿದ್ದಾರೆ.
ಇದರಿಂದ ರೋಸಿಹೋದ ಧಾಮೋದರ್ ಅವರು ವಿಚಾರಿಸಿದಾಗ ಆರೋಗ್ಯ ಇಲಾಖೆಯ ಆ್ಯಪ್ನಲ್ಲಿ 17 ಜನರು ಇದೇ ಮೊಬೈಲ್ ನಂಬರ್ ಕೊಟ್ಟಿರುವುದು ಬಯಲಾಗಿದೆ.
ವಿಶೇಷ ಅಂದರೆ ಮೊಬೈಲ್ ನಂಬರ್ ಹೊಂದಿರುವ ಧಾಮೋದರ್ ಅವರಿಗೆ ಸೋಂಕು ಇಲ್ಲ. ಯಾವುದೇ ತಪಾಸಣೆಗೂ ಒಳಗಾಗಿಲ್ಲ. ಆದರೂ ಇವರ ಸಂಖ್ಯೆ ಹೋಗಿದ್ದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
17 ಜನ ಒಂದೇ ಮೊಬೈಲ್ ಸಂಖ್ಯೆ ಕೊಟ್ಟಿದ್ದಾದರೂ ಹೇಗೆ?, ಓಟಿಪಿ ಪಡೆದಿದ್ದಾದರೂ ಹೇಗೆ? ಹೋಮ್ ಐಸೋಲೇಷನ್ ಇರುವವರಿಗೆ ಆರೋಗ್ಯ ಇಲಾಖೆ ನೀಡಬೇಕಾದ ಮೆಡಿಸಿನ್ ಕಿಟ್ ನೀಡಿದಾದರೂ ಹೇಗೆ? ಎಂಬ ಹಲವು ಅನುಮಾನಗಳು ಕಾಡುತ್ತಿವೆ.
ಮೇಲ್ನೋಟಕ್ಕೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಕೈವಾಡ ಇದ್ದಂತೆ ಕಂಡು ಬರುತ್ತಿದೆ. ಈ ಬಗ್ಗೆ ಡಿಹೆಚ್ಒ ಅವರನ್ನು ಕೇಳಿದರೆ, ತಾಲೂಕಾಧಿಕಾರಿಗಳಿಗೆ ವರದಿ ನೀಡಲು ಸೂಚಿಸಲಾಗಿದೆ. ವರದಿ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಓದಿ:ಲಾಕ್ಡೌನ್ ಎಫೆಕ್ಟ್ : ನಡೆದುಕೊಂಡು ಮನೆ ಸೇರಿದ ನವ ದಂಪತಿ