ಕಲಬುರಗಿ: ಭಾರತ ಲಾಕ್ಡೌನ್ ಆಗಿರುವ ಕಾರಣ ಹಿನ್ನೆಲೆ ಕಲ್ಲಂಗಡಿ ಮಾರಾಟ ಮಾಡಲಾಗದೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ. ಚಂದ್ರಕಾಂತ ಬಿರಾದಾರ (45) ನೇಣಿಗೆ ಶರಣಾದ ರೈತ ಎಂದು ಗುರುತಿಸಲಾಗಿದೆ.
ಕಲ್ಲಂಗಡಿ ಬೆಳೆದು ಸಾಲ ತೀರಿಸುವ ಬಯಕೆಯ ರೈತನ ಬದುಕು ಮುಗಿಸಿದ ಕೊರೊನಾ - ಕಲ್ಲಂಗಡಿ ಬೆಳೆದ ರೈತ ಆತ್ಮಹತ್ಯೆ
ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿಧಿಸಿರುವ ಲಾಕ್ಡೌನ್ ಇದೀಗ ನೇರವಾಗಿ ರೈತರ ಬದುಕಿಗೆ ಕೊಳ್ಳಿ ಇಡುತ್ತಿದೆ. ಇಲ್ಲೊಬ್ಬ ರೈತ ಸಮೃದ್ಧವಾಗಿ ಕಲ್ಲಂಗಡಿ ಬೆಳೆಯೇನೋ ತೆಗೆದ. ಅವುಗಳನ್ನು ಮಾರುಕಟ್ಟೆಗೆ ಸಾಗಿಸಿ ಕೈತುಂಬಾ ರೊಕ್ಕ ಸಂಪಾದಿಸಿ ಸಾಲ ತೀರಿಸುವ ಹಪಹಪಿಯಲ್ಲಿದ್ದ. ಆದ್ರೆ, ಕೊರೊನಾ ಅಬ್ಬರಿಸಿದ ಕಾರಣ ತಾನು ಮಾಡಿದ ಸಾಲ ತೀರಿಸುವುದು ಹೇಗೆಂದು ತಿಳಿಯಲಾರದೆ ಮರ್ಯಾದೆಗಂಜಿ ಬದುಕು ಮುಗಿಸಿದ.
ಲಾಡ ಚಿಂಚೋಳಿ ಗ್ರಾಮದ ತಮ್ಮ ಮೂರು ಎಕರೆ ಜಮೀನಿನಲ್ಲಿ ಚಂದ್ರಕಾಂತ ಕಲ್ಲಂಗಡಿ ಬೆಳೆದಿದ್ದರು. ಬೆಳೆ ಸಮೃದ್ಧವಾಗಿದ್ದರೂ ದೇಶ ಲಾಕ್ಡೌನ್ ಹಿನ್ನೆಲೆ ಕಲ್ಲಂಗಡಿ ಸಾಗಾಟಕ್ಕೆ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದರಿಂದ ಕಲ್ಲಂಗಡಿ ಮಾರಾಟ ಮಾಡಲಾಗದೇ ಮಾಡಿರುವ ಸಾಲ ತೀರುಸುವುದು ಹೇಗೆಂದು ಮನನೊಂದು ನಿನ್ನೆ ರಾತ್ರಿ ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 500 ಹೆಕ್ಟರ್ ಪ್ರದೇಶದಲ್ಲಿ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಕಟಾವು ಮಾಡದ ಕಾರಣ ಕಲ್ಲಂಗಡಿ ಜಮೀನಿನಲ್ಲಿಯೇ ಬಾಡಿ ಹೋಗುತ್ತಿದೆ. ಇಡೀ ಜಿಲ್ಲೆಯ ರೈತರ ಬಾಳಲ್ಲಿ ಕೊರೊನಾ ಕರಿನೆರಳು ಬಿದ್ದಿದ್ದು, ದಿಕ್ಕು ಕಾಣದ ರೈತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.