ಕಲಬುರಗಿ:ಭೀಮಾ ನದಿಗೆ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ರಕ್ಷಣಾ ಕಾರ್ಯ ಚುರುಕುಗೊಳಿಸಿದೆ. ಮಹಾರಾಷ್ಟ್ರದಿಂದ ಸದ್ಯ 80 ಸಾವಿರ ಕ್ಯೂಸೆಕ್ ನೀರು ಸೊನ್ನ ಬ್ಯಾರೇಜ್ಗೆ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಭೀಮಾ ನದಿಗೆ ಹರಿ ಬಿಡಲಾಗುತ್ತಿದೆ.
ಇದರಿಂದಾಗಿ ಅಫಜಲಪೂರ, ಜೇವರ್ಗಿ, ಕಲಬುರಗಿ, ಚಿತ್ತಾಪುರ ತಾಲೂಕಿನ ನದಿ ತಟದ ಗ್ರಾಮಗಳಿಗೆ ನೆರೆವುಂಟಾಗುತ್ತಿದೆ. ಇದರಿಂದಾಗಿ ಜಿಲ್ಲಾಡಳಿತ ರಕ್ಷಣಾ ಕಾರ್ಯ ಚುರುಕುಗೊಳಿಸಿದ್ದು, 22 ಅಂಬುಲೆನ್ಸ್ , 3 ಚಿಕ್ಕ ಗೂಡ್ಸ್ ವಾಹನ, 3 ಕ್ರೂಸರ್, ಎರಡು ಎನ್‌ಡಿಆರ್‌ಎಫ್ ತಂಡ, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆಗೆ ಇಳಿಸಲಾಗಿದೆ.
ಪ್ರವಾಹ ಕಾರ್ಯಾಚರಣೆಗೆ ಸಿದ್ಧತೆ ಈಗಾಗಲೇ ಬೀದರ್ ವಾಯು ನೆಲೆಯಲ್ಲಿ ಎರಡು ರಕ್ಷಣಾ ಹೆಲಿಕಾಫ್ಟರ್ ಸನ್ನದ್ದವಾಗಿದ್ದು, ಅಗತ್ಯ ಬಿದ್ದರೆ ಕಾರ್ಯಚರಣೆಗೆ ಇಳಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಅಫಜಲಪುರ ತಾಲೂಕಿನಲ್ಲಿ ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ 15 ಜನರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.
ಅಫಜಲಪುರ ತಾಲೂಕಿನ ಶಿವೂರ - ಕಡಬೂರ ಗ್ರಾಮಗಳ ಮಧ್ಯೆ ನಡುಗಡ್ಡೆಯಲ್ಲಿ ಸಿಲುಕಿದ್ದ ತಂದೆ ಮತ್ತು ಮಗನನ್ನು ಎನ್ಆರ್ಡಿಎಫ್, ಎಸ್ಆರ್ಡಿಎಫ್, ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು. ಹೋಳೆ ಭೋಸಗಾ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿದ್ದ ಹತ್ತು ಜನ ಗ್ರಾಮಸ್ಥರನ್ನು ಪ್ರವಾಹದಿಂದ ರಕ್ಷಣಾ ತಂಡಗಳು ಸ್ಥಳಾಂತರ ಮಾಡಿವೆ. ಭೀಮಾ ಪ್ರವಾಹದಲ್ಲಿ ಅತಂತ್ರರಾಗಿದ್ದ ಹಿರಿಯಾಳ ಗ್ರಾಮದಲ್ಲಿ ಮೂವರನ್ನು ರಕ್ಷಣಾ ಮಾಡಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.
ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಸೇತುವೆ ಮೇಲೆ ವಾಹನ ಸಂಚಾರವನ್ನು ಮತ್ತೆ ನಿರ್ಬಂಧಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ವಿಜಯಪುರ ಸೇರಿದಂತೆ ವಿವಿಧೆಡೆ ಸಂಚರಿಸುವ ವಾಹನ ಸವಾರರು ಪರದಾಡುತ್ತಿದ್ದಾರೆ.