ಕಲಬುರಗಿ:ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆ ವತಿಯಿಂದ ತಲಾ 3 ಸಾವಿರ ರೂಪಾಯಿಯಂತೆ 12 ಕೋಟಿ 7.5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸಹಕಾರ ಇಲಾಖೆ ವತಿಯಿಂದ ರಾಜ್ಯದ 42,000 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ನಗರದ ಎಸ್ಎಂ ಪಂಡಿತ ರಂಗಮಂದಿರದಲ್ಲಿ ಪ್ರೋತ್ಸಾಹಧನ ವಿತರಿಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ. ರಾಜ್ಯಾದ್ಯಂತ ಈಗಾಗಲೇ 16 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಕೊಟ್ಟಿದ್ದೇವೆ. ಇದಲ್ಲದೆ ಎಪಿಎಂಸಿ ಮತ್ತು ಸಹಕಾರ ಇಲಾಖೆ ಸೇರಿ 53 ಕೋಟಿ ಹಣವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಸೂಪರ್ ಸೀಡ್:
ರಾಜ್ಯದ ಮೈಸೂರು, ಮಂಡ್ಯ, ಶಿವಮೊಗ್ಗ, ಕಲಬುರಗಿ ಡಿಸಿಸಿ ಬ್ಯಾಂಕ್ಗಳಲ್ಲಿ ಅವ್ಯವಹಾರ ನಡೆದಿದೆ ಅನ್ನೋ ಆರೋಪ ಇದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಲಬುರಗಿಯ ಡಿಸಿಸಿ ಬ್ಯಾಂಕ್ಅನ್ನು ನಾವು ಈಗಾಗಲೇ ಸೂಪರ್ ಸೀಡ್ ಮಾಡಿದ್ದೇವೆ. ಹೊಸ ಅಡ್ಮಿನಿಸ್ಟ್ರೇಷನ್ ನೇಮಕಕ್ಕೆ ನಬಾರ್ಡ್ನವರು ಅನುಮತಿ ನೀಡಬೇಕಿದೆ. ಮೂರ್ನಾಲ್ಕು ದಿನಗಳಲ್ಲಿ ಅನುಮತಿ ಬರಲಿದ್ದು, ಅನುಮತಿ ಸಿಕ್ಕ ತಕ್ಷಣ ಹೊಸ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ಮಾಡುತ್ತೇವೆ. ನಂತರ ಬಾಕಿ ವಸೂಲಾತಿ ಹಾಗೂ ಇನ್ನೊಂದೆಡೆ ಅರ್ಹ ರೈತರಿಗೆ ಸಾಲ ನೀಡುವ ಕೆಲಸ ಆರಂಭಗೊಳ್ಳಲಿದೆ. ಅಪೆಕ್ಸ್ ಬ್ಯಾಂಕ್ನಿಂದ ಡಿಸಿಸಿ ಬ್ಯಾಂಕ್ಗಳಿಗೆ ಸಾಲ ನೀಡಲಾಗುತ್ತಿದೆ.
ಈ ಹಣ ಈಗಿರುವ ಬೋರ್ಡ್ ಕೈಗೆ ನೀಡಿದರೆ ರೈತರಿಗೆ ತಲುಪುವುದಿಲ್ಲ ಎಂಬ ಆರೋಪವಿದೆ. ಇದೇ ಕಾರಣಕ್ಕೆ ನಬಾರ್ಡ್ ಅನುಮತಿ ಬಂದ ತಕ್ಷಣ ಹೊಸದಾಗಿ ಕಾರ್ಯನಿರ್ವಾಹಕ ಅಧಿಕಾರಿ ನೇಮಿಸಿ ಸಾಲ ಹಂಚಿಕೆ ಕೆಲಸ ಮಾಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.