ಕಲಬುರಗಿ: ವಿಮಾನ ನಿಲ್ದಾಣದಲ್ಲಿನ ದೇವಸ್ಥಾನ ತೆರವು ವಿವಾದ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ದೇವಸ್ಥಾನ ತೆರವಿಗೆ ತಾವು ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಆರೋಪ ಸಾಬೀತುಪಡಿಸಿದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಉಮೇಶ್ ಜಾಧವ್ ಸವಾಲು ಹಾಕಿದ್ದಾರೆ.
ವಿಮಾನ ನಿಲ್ದಾಣದಲ್ಲಿನ ದೇವಸ್ಥಾನ ತೆರವು ವಿಚಾರ ಕಾಂಗ್ರೆಸ್, ಬಂಜಾರ ಸಮಾಜದ ನಾಯಕರು ಹಾಗೂ ಬಂಜಾರ ಸಮಾಜದವರೆ ಆದ ಕಲಬುರ್ಗಿ ಸಂಸದ ಉಮೇಶ್ ಜಾಧವ್ ನಡುವೆ ವಾಕ್ ಸಮರಕ್ಕೆ ಕಾರಣವಾಗಿದೆ. ಸಂಸದ ಜಾಧವ್ ಅವರೇ ಮುಂದೆ ನಿಂತು ದೇವಸ್ಥಾನ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದವರು ಸಾಕ್ಷಿ ಸಮೇತ ನಿರೂಪಿಸಿ ತೋರಿಸಿದರೆ ತಾವು ರಾಜೀನಾಮೆ ನೀಡುವುದಾಗಿ ಸಂಸದ ಜಾಧವ್ ಚಾಲೆಂಜ್ ಹಾಕಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಸಂಸದ ಇರಬಹುದು ಆದರೆ ಸಮುದಾಯದಿಂದ ಹೊರತಾಗಿಲ್ಲ, ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಇನ್ನು ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಕೂಡಾ ಸ್ಪಷ್ಟನೆ ನೀಡಿದೆ. ರನ್ ವೇಗೆ ತುಂಬ ಹತ್ತಿರದಲ್ಲಿದ್ದ ಕಾರಣ ಡಿಜಿಸಿಎ ತಂಡದ ನಿರ್ದೇಶನದಂತೆ ದೇವಸ್ಥಾನ ತೆರವು ಮಾಡಲಾಗಿದೆ. ಕಲಬುರಗಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಸರ್ಕಾರದಿಂದ ನೂತನ ಗ್ರಾಮದಲ್ಲಿ ಪುನರ್ ವಸತಿ ಕಲ್ಪಿಸಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳು ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಪ್ರತ್ಯೇಕ ದೇವಸ್ಥಾನವನ್ನು ಸಹ ನಿರ್ಮಿಸಲಾಗಿದೆ.
ಆ ಸಂದರ್ಭದಲ್ಲಿ ವಿಮಾನ ನಿಲ್ದಾಣ ಪ್ರದೇಶದಲ್ಲಿದ್ದ ಹಳೇ ದೇವಸ್ಥಾನದಲ್ಲಿನ ವಿಗ್ರಹವನ್ನು ಪುನರ್ ವಸತಿ ಕಲ್ಪಿಸಿರುವ ನೂತನ ದೇವಸ್ಥಾನಕ್ಕೆ ಸ್ಥಳಾಂತರಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಾಗ, ಗ್ರಾಮಸ್ಥರು ಹೊಸದಾಗಿ ನಿರ್ಮಾಣವಾಗಿದ್ದ ದೇವಸ್ಥಾನದಲ್ಲಿ ಹಳೆಯ ವಿಗ್ರಹವನ್ನು ಸ್ಥಾಪಿಸಲು ಬರುವುದಿಲ್ಲ. ಆದ್ದರಿಂದ ನೀವು ಇದ್ದ ವಿಗ್ರಹವನ್ನು ತೆಗೆದು ವಿಧಿವತ್ತಾಗಿ ವಿಸರ್ಜನೆ ಮಾಡಲು ನಮ್ಮ ಅಭ್ಯಂತರವಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ಧಾರ್ಮಿಕ ವಿಧಿ-ವಿಧಾನದಂತೆ ವಿಗ್ರಹವನ್ನು ಜಲಸಮರ್ಪಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.