ಕಲಬುರಗಿ:ನಾನು ಹೈಕಮಾಂಡ್ ಆದೇಶ ಪಾಲನೆ ಮಾಡ್ತೇನೆ. ಆಗ ಒಬ್ಬರೆ ಡಿಸಿಎಂ ಸಾಕು ಅಂದಿದ್ರು. ಈಗ ಇವರು ಹೈಕಮಾಂಡ್ದೊಂದಿಗೆ ಚರ್ಚೆ ಮಾಡ್ತಿನಿ ಅಂತಿದ್ದಾರೆ. ಕಡೆಗೆ ಹೈಕಮಾಂಡ್ ಏನು ಹೇಳುತ್ತೋ ಹಾಗೆ ನಾನು ನಡೆದುಕೊಳ್ತೇನೆ ಅಂತ ಮೂರು ಡಿಸಿಎಂ ಹುದ್ದೆ ಬೇಡಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೂರು ಜನ ಡಿಸಿಎಂ ಆಗಬೇಕು ಅನ್ನೋ ಸಚಿವ ಕೆ ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಕಲಬುರಗಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೈಕಮಾಂಡ್ದೊಂದಿಗೆ ಚರ್ಚೆ ಕೂಡಾ ಮಾಡ್ತಿವಿ ಎಂದಿದ್ದಾರೆ. ನೋಡೋಣ, ಮೂರು ಡಿಸಿಎಂ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಹಾಗೆ ನಾನು ನಡೆದುಕೊಳ್ತೆನೆ ಎಂದು ಹೇಳಿದರು.
ಕಾಂಗ್ರೆಸ್ ಐದು ಗ್ಯಾರಂಟಿ ಗುಂಗಿನಲ್ಲಿದೆ. ಅಭಿವೃದ್ಧಿ ಆಗ್ತಿಲ್ಲ ಎಂಬ ಬಿಎಸ್ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಐದು ಗ್ಯಾರಂಟಿಗಳು ಅಭಿವೃದ್ಧಿ ಅಲ್ವಾ? ಎಂದು ಪ್ರಶ್ನೆ ಮಾಡಿದರು. ಯಾವ ಸರ್ಕಾರ 1 ಕೋಟಿ 13 ಲಕ್ಷ ಜನರಿಗೆ ಎರಡು ಸಾವಿರ ರೂಪಾಯಿ ಕೊಟ್ಟಿದೆ?. ಅವರ ಕಾಲದಲ್ಲಿ 7 ಕೆ.ಜಿ ಬದಲು ಐದು ಕೆ.ಜಿ ಅಕ್ಕಿ ಕೊಟ್ಟಿದ್ದಾರೆ. ಅದರಲ್ಲಿಯೇ ಗಿರಕಿ ಹೊಡೆದ್ರು ಮಿಸ್ಟರ್ ಯಡಿಯೂರಪ್ಪ ಎಂದು ಕುಟುಕಿದರು. ಈಗ ಪಾದಯಾತ್ರೆಗೆ ತಯಾರಾಗಿದ್ದಾರೆ. ಏನು ಗ್ಯಾರಂಟಿ ಯೋಜನೆಗಳ ಪರವಾಗಿ ಪಾದಯಾತ್ರೆ ಮಾಡ್ತಾರಾ ಎಂದು ವ್ಯಂಗ್ಯವಾಡಿದರು.
ಅವರು 600 ಭರವಸೆ ಕೊಟ್ಟು 10% ಭರವಸೆ ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡೋದಾಗಿ ಹೇಳಿ ಸಾಲ ಮನ್ನಾ ಮಾಡಿದ್ರಾ ಯಡಿಯೂರಪ್ಪ?. ನೀರಾವರಿಗೆ ಲಕ್ಷ ಕೋಟಿ ಕೊಡುವುದಾಗಿ ಹೇಳಿದ್ರು, ಕೊಟ್ರಾ? ಎಂದು ಪ್ರಶ್ನೆ ಮಾಡಿದರು. ತಮಿಳುನಾಡಿಗೆ ನೀರು ಬಿಡಬಾರದು ಅಂತಾ ಯಡಿಯೂರಪ್ಪ ಹೇಳ್ತಿದ್ದಾರೆ. ರಾಜಕೀಯ ಮಾಡೋದಕ್ಕೆ ಏನಾದ್ರೂ ಹೇಳಬೇಕಲ್ಲಾ, ಯಡಿಯೂರಪ್ಪ ಕಾಲದಲ್ಲೂ ನೀರು ಬಿಟ್ಟಿದ್ದಾರೆ. ಎಲ್ಲರ ಕಾಲದಲ್ಲೂ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಕೊಡಬೇಕೆಂಬ ಆದೇಶ ಇದೆ. ಆದ್ರೆ ಮಳೆ ಇಲ್ಲದೆ ನೀರಿನ ಕೊರತೆ ನಮಗಿದೆ. ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದೇವೆ. ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸದಿದ್ರೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಎದುರಾಗುತ್ತೆ. ಹಾಗಾಗಿ ನಾವು ಇವತ್ತಿನವರೆಗೆ ಕೇವಲ 37.7 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಸಿಎಂ ಹೇಳಿದರು.