ಚುನಾವಣೆಗೆ ನಿಲ್ಲುವುದಾಗಿ ಆರ್ ಡಿ ಪಾಟೀಲ್ ಹೇಳಿಕೆ ಕಲಬುರಗಿ:ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಪಿಎಸ್ಐ ಪರೀಕ್ಷೆ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್ಡಿ ಪಾಟೀಲ್ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಸಂದೇಶ ರವಾನಿಸಿದ್ದಾರೆ. ನಾನು ತೆಲೆಮರೆಸಿಕೊಂಡಿಲ್ಲ, ಇದೊಂದು ಸುಳ್ಳು ಸುದ್ದಿ, ಯಾರೂ ಆತಂಕಪಡಬಾರದು, ಶೀಘ್ರವೇ ನಿಮ್ಮ ಸೇವೆಗೆ ಹಾಜರಾಗುತ್ತೇನೆಂದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಅಜ್ಞಾತ ಸ್ಥಳದಿಂದ ಸುಮಾರು ಏಳು ನಿಮಿಷಗಳ ಕಾಲ ಮಾತನಾಡಿರುವ ವಿಡಿಯೋ ಮಧ್ಯರಾತ್ರಿ 1-30 ರ ಸುಮಾರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ ಹರಿ ಬಿಡಲಾಗಿದೆ. ಕ್ಷೇತ್ರದ ಜನ ಬಯಸಿದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಅಫಜಲಪುರ ಮತಕ್ಷೇತ್ರದಿಂದ ಅಭ್ಯರ್ಥಿಯಾಗುವುದಾಗಿ ಹೇಳಿದ್ದಾರೆ.
’’ರಾಜಕೀಯ ಕುತಂತ್ರದಿಂದ ನನ್ನನ್ನ ಪಿಎಸ್ಐ ಪರೀಕ್ಷೆ ಹಗರಣದಲ್ಲಿ ಸಿಲುಕಿಸಲಾಗಿದೆ. ರಾಜಕೀಯ ಮುಖಂಡರ ಮಾತು ಕೇಳಿಕೊಂಡು ಅಧಿಕಾರಿಗಳು ನನ್ನನ್ನು ಹಗರಣದಲ್ಲಿ ಸಿಲುಕಿಸಿದ್ದಾರೆ. ನಾನು ನನ್ನ ಸಹೋದರ ರಾಜಕೀಯವಾಗಿ ಬೆಳೆಯಬಾರದು ಎನ್ನುವ ದುರುದ್ದೇಶದಿಂದ ಕೇಲ ರಾಜಕೀಯ ಕುತಂತ್ರಿಗಳು ಹೀಗೆ ಮಾಡಿದ್ದಾರೆ. ಇಂತಹ ಹತ್ತು ಹಲವು ಪ್ರಕರಣಗಳಲ್ಲಿ ಸಿಲುಕಿಸಿದರು ನಾವು ಹೆದರುವುದಿಲ್ಲ‘‘ ಎಂದು ಆರ್ಡಿ ಪಾಟೀಲ್ವಿಡಿಯೋಸಂದೇಶದಲ್ಲಿ ತಿಳಿಸಿದ್ದಾರೆ.
’’ನಾನು ಎಲ್ಲಿಯೂ ಪರಾರಿಯಾಗಿಲ್ಲ. ಮಾಧ್ಯಮದವರು ಏಕಮುಖಿಯಾಗಿ ಮಾಹಿತಿ ಪಡೆದು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ನಾನು ಯಾವ ಅಧಿಕಾರಿಯಿಂದಲೂ ತಪ್ಪಿಸಿಕೊಂಡು ಓಡಿ ಹೋಗಿಲ್ಲ. ಈ ನೆಲದ ಕಾನೂನಿನ ಮೇಲೆ ನಂಬಿಕೆ, ಗೌರವವಿದೆ. ಗುರುವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಸುದೀರ್ಘ ವಿಚಾರಣೆ ಮಾಡಿದ್ದಾರೆ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಬಳಿಕ ರಾತ್ರಿ ಮನೆಯಿಂದ ಹೊರಗೆ ಹೋದಾಗ ಸಿಐಡಿ ಅಧಿಕಾರಿಗಳಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದೇನೆ ಎಂದು ಸುದ್ದಿ ಮಾಡಲಾಗಿದೆ‘‘.
’’ಮಾಧ್ಯಮ ಸ್ನೇಹಿತರು ಏಕಮುಖಿ ಮಾಹಿತಿ ಪಡೆದು ಪರಾರಿಯಾಗಿದ್ದೇನೆಂದು ಸುದ್ದಿ ಮಾಡಿದ್ದಾರೆ. ನಾನೇಲ್ಲಿಯೂ ಪರಾರಿಯಾಗಿಲ್ಲ ಯಾರು ಹೆದರುವ ಅವಶ್ಯಕತೆ ಇಲ್ಲ. ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ನಮಗೆ ಎಷ್ಟೇ ಕಷ್ಟ ಬಂದರೂ ಹೆದರದೇ ಜನರ ಸೇವೆ ಮುಂದುವರೆಸುತ್ತೇವೆ. ಈ ಮೊದಲು ನಾನು ಎಲ್ಲಿಯೂ ಚುನಾವಣೆ ಸ್ಪರ್ಧಿಸುವುದಾಗಿ ಹೇಳಿಲ್ಲ. ಆದರೆ ಈಗ ಹೇಳುತ್ತಿದ್ದೇನೆ. ಕ್ಷೇತ್ರದ ಜನ ಬಯಸಿದರೆ ಬರುವ ಚುನಾವಣೆಯಲ್ಲಿ ಅಫಜಲಪುರ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವೆ. ಅಭಿಮಾನಿ ಹಿತೈಸಿಗಳು ಹಾಗೂ ಕ್ಷೇತ್ರದ ಜನರ ಆಶೀರ್ವಾದ ನನ್ನ ಹಾಗೂ ನನ್ನ ಸಹೋದರ ಮಹಾಂತೇಶ್ ಪಾಟೀಲ್ ಮೇಲೆ ಇರಲಿ‘‘ ಎಂದು ಆರ್ಡಿ ಪಾಟೀಲ್ ಮನವಿ ಮಾಡಿದ್ದಾರೆ.
ಆರ್ಡಿ ಪಾಟೀಲ್ ನಿವಾಸದ ಮೇಲೆ ಇಡಿ ದಾಳಿ: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ಪ್ರಮುಖ ಆರೋಪಿಗಳ ಮನೆಗಳ ಮೇಲೆ ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಕಡತಗಳ ಪರಿಶೀಲನೆ ನಡೆಸಿದ್ದರು.
ಓದಿ:ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್‌ಪಿನ್ ಆರ್.ಡಿ.ಪಾಟೀಲ್ ವಿರುದ್ದ ಹೊಸ ಪ್ರಕರಣ ದಾಖಲು