ಕರ್ನಾಟಕ

karnataka

ETV Bharat / state

ಅವಧಿ ಮುಗಿದ್ರೂ ಹಾಸ್ಟೆಲ್​ನಲ್ಲಿ ಪುಂಡರ ಹಾವಳಿ; ಅರ್ಹ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ!

ವಸತಿ ನಿಲಯ ಸೇರಿದ ಹಲವರು ಅವಧಿ ಪೂರ್ಣಗೊಂಡ ನಂತರವೂ ಹಾಸ್ಟೆಲ್​​ನಲ್ಲಿಯೇ ವಾಸ ಮಾಡುವ ಮೂಲಕ ದರ್ಪ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

By

Published : Jun 26, 2019, 11:21 AM IST

Updated : Jun 26, 2019, 12:47 PM IST

ಕುಲಪತಿ ಎಸ್.ಪಿ. ಮೇಲಿನಕೇರಿ

ಕಲಬುರಗಿ:ಉನ್ನತ ಶಿಕ್ಷಣಕ್ಕೆ ನೆರವಾಗಲಿ, ಬಡ ವಿದ್ಯಾರ್ಥಿಗಳ ವಸತಿಗೆ ಸಹಾಯವಾಗಲಿ ಎಂದು ಪ್ರಾರಂಭವಾದ ಗುಲ್ಬರ್ಗಾ ವಿವಿ ವಸತಿ ನಿಲಯದಲ್ಲೀಗ ಅಕ್ರಮ ತಾಂಡವವಾಡ್ತಿದೆ. ಶಿಕ್ಷಣದ ಅವಧಿ ಮುಗಿದರೂ ಕೆಲವರು ತಮ್ಮ ಸ್ವಂತ ಮನೆ ಅನ್ನೋಹಾಗೆ ಅಲ್ಲಿಯೇ ಬಿಡಾರ ಹೂಡಿದ್ದು, ಅರ್ಹ ವಿದ್ಯಾರ್ಥಿಗಳು ವಸತಿಯಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿಶ್ವ ವಿದ್ಯಾನಿಲಯಗಳು ಉನ್ನತ ಮಟ್ಟದ ಶಿಕ್ಷಣ ನೀಡುವ ಜ್ಞಾನ ದೇಗುಲಗಳು. ಆದರೆ ಕೆಲವರಿಂದ ವಿವಿಯ ಮಾನ-ಮಾರ್ಯಾದೆ ಹರಾಜು ಆಗ್ತಿದೆ. ವಿವಿ ಆವರಣದಲ್ಲಿರುವ ನೃಪತುಂಗ ಸಂಶೋಧನಾ ವಿದ್ಯಾರ್ಥಿಗಳ ವಸತಿ ನಿಲಯ ವಿದ್ಯಾರ್ಥಿಗಳಿಗಿಂತ ಹೊರಗಿನವರಿಗೆ ಆಶ್ರಯ ತಾಣವಾಗಿದೆ ಎಂಬ ದೂರುಗಳು ಜೋರಾಗಿ ಕೇಳಿಸುತ್ತಿದೆ.

ಸಾಮಾಜಿಕ ಕಾರ್ಯಕರ್ತರಾದ ಸಾಯಬಣ್ಣಾ ಜಮಾದಾರ

ನೃಪತುಂಗದಲ್ಲಿ ಒಟ್ಟು 120 ಕೊಠಡಿಗಳಿವೆ. ಇದರಲ್ಲಿ 250 ವಿದ್ಯಾರ್ಥಿಗಳು ವಾಸ ಮಾಡಬಹುದು. ಆದರೆ 120 ಕೊಣೆಯಲ್ಲಿ 20 ರಿಂದ 25 ಕೊಠಡಿಗಳನ್ನು ಕೆಲವರು ಅಕ್ರಮವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ಸಂಶೋಧನೆ ವ್ಯಾಸಂಗಕ್ಕೆಂದು ವಸತಿ ನಿಲಯ ಸೇರಿದ ಹಲವರು ಮೂರು ವರ್ಷ ಅವಧಿಯ ಸಂಶೋಧನೆ ಪೂರ್ಣಗೊಂಡ ನಂತರವೂ ವಸತಿ ನಿಲಯ ತೊರೆಯದೇ ನಿಯಮಗಳನ್ನು ಗಾಳಿಗೆ ತೂರಿ, ಇದೇ ಹಾಸ್ಟೆಲ್​​ನಲ್ಲೇ ವಾಸ ಮಾಡುವ ಮೂಲಕ ದರ್ಪ ತೋರಿಸುತ್ತಿದ್ದಾರೆ. ಈ ಬಗ್ಗೆ ವಾರ್ಡನ್ ಸಹ ಚಕಾರವೆತ್ತದೆ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ನೃಪತುಂಗ ವಸತಿ ನಿಲಯ ವಿದ್ಯಾರ್ಥಿಗಳ ಪಾಲಿನ ವಾಸಸ್ಥಾನವಾಗಿ ಉಳಿಯದೆ ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ ಎಂಬ ಆರೋಪ ಕೂಡಾ ಕೇಳಿಬರುತ್ತಿದೆ.

ವಿವಿಯಲ್ಲಿ ಅತಿಥಿ ಉಪನ್ಯಾಸಕರು, ವಿವಿ ಪ್ರೊಫೆಸರ್​ಗಳ ಆಪ್ತರು ಸಹ ಇಲ್ಲಿ ವಾಸವಿದ್ದಾರೆ. ಮಾತ್ರವಲ್ಲ,ವಿದ್ಯಾರ್ಥಿಗಳಿಗೆ ತೊಂದರೆ ಕೊಡುವುದು, ಶಿಕ್ಷಣ ದೇಗುಲದಲ್ಲಿ ನಿತ್ಯ ಮದ್ಯ, ಸಿಗರೇಟ್ ಸೇವನೆ ಮಾಡುವುದು, ಜಗಳವಾಡುವುದು ಹಾಗೂ ತಮ್ಮದೇ ದರ್ಬಾರ್ ನಡೆಯಬೇಕೆಂದು ಗುಂಪುಗಾರಿಕೆ ಮಾಡುವ ಮೂಲಕ ವಸತಿ ನಿಲಯದ ವಾತಾವರಣಕ್ಕೆ ಧಕ್ಕೆ ತಂದು ನಿಜವಾದ ವಿದ್ಯಾರ್ಥಿಗಳ ಪಾಲಿನ ಕಂಟಕರಾಗಿ ಕಾಡ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರಾದ ಸಾಯಬಣ್ಣಾ ಜಮಾದಾರ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಭಾರಿ ಕುಲಪತಿ ಎಸ್.ಪಿ. ಮೇಲಿನಕೇರಿ, ಈ ವಿಚಾರ ತಮ್ಮ ಗಮನಕ್ಕೂ ಬಂದಿದೆ. ಶೀಘ್ರವೇ ಅನಧಿಕೃತರನ್ನು ಹಾಸ್ಟೆಲ್​ನಿಂದ ಹೊರಹಾಕಿ ಅರ್ಹ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುವುದಾಗಿ ತಿಳಿಸಿದರು.

Last Updated : Jun 26, 2019, 12:47 PM IST

ABOUT THE AUTHOR

...view details