ಕಲಬುರಗಿ:ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯ ಮಕ್ಕಳಿಂದ ಶಾಲೆಯ ಹಾಗೂ ತಮ್ಮ ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದೆ. ಕಲಬುರಗಿ ನಗರದ ಮಾಲಗತ್ತಿ ಗ್ರಾಮದ ರಸ್ತೆಯಲ್ಲಿರೋ ಮೌಲಾನಾ ಆಜಾದ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಘಟನೆ ನಡೆದಿದೆ.
ಕಳೆದೊಂದು ವರ್ಷದಿಂದ ವಿದ್ಯಾರ್ಥಿಗಳನ್ನ ಮನೆಗೆಲಸಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಕೆಲ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಶೌಚಾಲಯ ಸ್ವಚ್ಛಪಡಿಸಿ, ಕೆಲ ವಿದ್ಯಾರ್ಥಿಗಳನ್ನ ಮನೆಗೆ ಕರೆದುಕೊಂಡು ಹೋಗಿ ಶೌಚಾಲಯ ಸ್ವಚ್ಛ ಮಾಡಿಸುತ್ತಿದ್ದರು. ಒಂದು ವೇಳೆ ವಿದ್ಯಾರ್ಥಿಗಳು ಕೆಲಸಕ್ಕೆ ನಿರಾಕರಿಸಿದರೆ ಮುಖ್ಯೋಪಾಧ್ಯಾಯರಾದ ಜೋಹರಾ ಜುಬೀನ್ ಅವರು ಬಯ್ಯುವುದು, ಹೊಡೆಯುವುದು ಮಾಡುತ್ತಿದ್ದರು ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆರೋಪಿಸಿದ್ದಾರೆ.
ಕಳೆದ ಶನಿವಾರ ವಿದ್ಯಾರ್ಥಿಯೊಬ್ಬನನ್ನು ಶಾಲೆ ಬಿಟ್ಟ ನಂತರ ಬಲವಂತದಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿಯಿಂದ ತಮ್ಮ ಮನೆಯ ಗಾರ್ಡನ್ ಸ್ವಚ್ಛಗೊಳಿಸುವ ಕೆಲಸ ಮಾಡಿಸಿಕೊಂಡಿದ್ದಾರೆ. ಕೆಲಸ ಮಾಡದಿದ್ದರೆ ಬಟ್ಟೆ ಬಿಚ್ಚಿ ಹೊಡೆಯುವುದಾಗಿ ಮುಖ್ಯ ಶಿಕ್ಷಕಿ ಬೆದರಿಕೆ ಹಾಕಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತಮ್ಮ ಮಗನಿಂದ ಮನೆ ಕೆಲಸ ಮಾಡಿಸಿಕೊಂಡಿರುವುದನ್ನು ಪ್ರಶ್ನಿಸಿದ ಪೋಷಕರ ಮೇಲೆ ಮುಖ್ಯ ಶಿಕ್ಷಕಿಯ ಪತಿ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಮುಖ್ಯ ಶಿಕ್ಷಕಿ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.