ಕಲಬುರಗಿ:ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿದೆ. ಇಂದು ಎಲ್ಲ ಬಿಕ್ಕಟ್ಟು ಸರಿಹೋಗುವ ವಿಶ್ವಾಸ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರಗಿ ಪ್ರವಾಸದಲ್ಲಿರುವ ಅವರು, ಅನರ್ಹ ಶಾಸಕರ ಕುರಿತಾಗಿರುವ ಸಾಂವಿಧಾನಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ಕುರಿತು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿ ಸೂಕ್ತ ತೀರ್ಪು ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ. ಆದ್ರೆ ಹಿಂದಿನ ಸ್ಪೀಕರ್ ಅವರ ಆದೇಶದ ಹಿನ್ನೆಲೆ ಅನರ್ಹರು ಸ್ಪರ್ಧೆ ಮಾಡುವಂತಿಲ್ಲ. ಹೀಗಾಗಿ ಕೆಲ ಕಾನೂನಾತ್ಮಕ, ಸಾಂವಿಧಾನಿಕ ಮತ್ತು ರಾಜಕೀಯ ಗೊಂದಲವುಂಟಾಗಿದೆ. ಶೀಘ್ರವೇ ಸುಪ್ರೀಂಕೋರ್ಟ್ ಎಲ್ಲದಕ್ಕೂ ದಾರಿ ತೋರಿಸುವ ವಿಶ್ವಾಸವಿದೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ರು.
ಇನ್ನು, ಅನರ್ಹರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಅನ್ನೋದ್ರ ಬಗ್ಗೆ ಮುಂದಿನ ದಿನಗಳಲ್ಲಿ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದ ಸಚಿವರು, ಎರಡು ತಿಂಗಳಲ್ಲಿ ಸರ್ಕಾರ ಬೀಳಲಿದೆ ಎಂಬ ಕೊಡಿ ಶ್ರೀಗಳ ಭವಿಷ್ಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.