ಕಲಬುರಗಿ:ಮಹದಾಯಿ ನದಿ ನೀರು ಹಂಚಿಕೆಯ ವಿಚಾರದಲ್ಲಿ ಕೇಂದ್ರ ಗೆಜೆಟ್ ಹೊರಡಿಸಿರುವುದು ರಾಜ್ಯಕ್ಕೆ ದೊರೆತ ಜಯ. ಇದರ ಶ್ರೇಯಸ್ಸು ಎಲ್ಲಾ ಮಹದಾಯಿ ಹೋರಾಟಗಾರರಿಗೆ ಸಲ್ಲಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಸುಪ್ರೀಂ ಕೋರ್ಟ್ನಲ್ಲಿ ಆದೇಶ ಆದ ತಕ್ಷಣ ಗೋವಾದವರು ಮತ್ತೆ ಅದರ ಬಗ್ಗೆ ಕ್ಯಾತೆ ತೆಗೆಯೋ ಮುಂಚೆ ಕೇಂದ್ರ ಸರ್ಕಾರ ನಮ್ಮ ಮನವಿಗೆ ಮನ್ನಣೆ ಕೊಟ್ಟು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜಲ ಸಂಪನ್ಮೂಲ ಸಚಿವ ಶೇಖಾವತ್ ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಮಹದಾಯಿ ವಿಚಾರದಲ್ಲಿ ಕೆಂದ್ರದಿಂದ ಉತ್ತಮ ನಿರ್ಧಾರ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದೇ ವೇಳೆ ಸಿಎಎ ವಿರೋಧಿ ಹೋರಾಟ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹೋರಾಟ ನಡೆಸಲು ಎಲ್ಲರಿಗೂ ಅವಕಾಶ ಇದೆ. ಆದ್ರೆ ಕಾನೂನು ಮೀರಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಬಸನಗೌಡ ಯತ್ನಾಳ್ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು ಎಂದರು.
ಅಧಿವೇಶನ ನಡೆಯಲು ಬಿಡುವುದಿಲ್ಲ ಎನ್ನುವ ಕಾಂಗ್ರೆಸ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಅಧಿವೇಶನದಲ್ಲಿ ಅವರು ಚರ್ಚಿಸಲಿ. ಅವರ ಚರ್ಚೆಗೆ ಉತ್ತರಿಸಲು ನಾವೂ ಸಿದ್ಧರಿದ್ದೇವೆ. ವಿನಾಕಾರಣ ನಮ್ಮ ಬಗ್ಗೆ ಮಾತಾಡಲು ಕಾಂಗ್ರೆಸ್ಗೆ ನೈತಿಕತೆ ಇಲ್ಲವೆಂದು ಹೇಳಿದ್ರು.