ಕಲಬುರಗಿ :ರಾಜ್ಯದಲ್ಲೆಡೆ ಹಿಜಾಬ್, ಮುಸಲ್ಮಾನರಿಗೆ ಹಿಂದೂ ದೇಗುಲಗಳ ಬಳಿ ವ್ಯಾಪಾರಕ್ಕೆ ಬಹಿಷ್ಕಾರ, ಹಲಾಲ್ ಈ ಎಲ್ಲಾ ವಿವಾದಗಳು ಇನ್ನೂ ಬೂದಿ ಮುಚ್ಚಿದ ಕೆಂಡದಂತಿವೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಇಂದು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ತಾವೆಲ್ಲ ಒಂದೇ ಎಂದು ಸೌಹಾರ್ದತೆ ಮೆರೆದಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸರ್ವಧರ್ಮಗಳ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿ ಬೇವು-ಬೆಲ್ಲ ಸವಿದು ಸೌಹಾರ್ದತೆ ಮೆರೆದರು.
ಸಮುದಾಯ ಕಲಬುರಗಿ ಮತ್ತು ಸೌಹಾರ್ದ ಕರ್ನಾಟಕ ವೇದಿಕೆ ವತಿಯಿಂದ ಇಂದು ನಗರದ ಜಗತ್ ವೃತ್ತದಲ್ಲಿ, ಸೌಹಾರ್ದ ಭಾರತಕ್ಕಾಗಿ ಸೌಹಾರ್ದ ಯುಗಾದಿಯನ್ನ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು. ಹೋರಾಟಗಾರ್ತಿ ಕೆ. ನೀಲಾ ನೇತೃತ್ವದಲ್ಲಿ ನಡೆದ ಯುಗಾದಿ ಹಬ್ಬದ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳ ಗುರುಗಳು ಭಾಗವಹಿಸಿದ್ದರು. ಮುಸ್ಲಿಂ ಮಹಿಳೆಯರಿಗೆ ಮತ್ತು ಧರ್ಮ ಗುರುಗಳಿಗೆ ಬೇವು ಬೆಲ್ಲದ ಪಾನಕ ಕುಡಿಸಿ ಯುಗಾದಿ ಹಬ್ಬದ ಪರಸ್ಪರ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡರು.