ಕಲಬುರಗಿ: ಫೆಬ್ರವರಿ 5 ರಂದು ನಿಗದಿಯಾಗಿರುವ ಕಲಬುರಗಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಚುನಾವಣೆ ಮತದಾರರ ಪಟ್ಟಿಯಲ್ಲಿ ಜಿಲ್ಲೆಗೆ ಸಂಬಂಧಿಸದ ಐವರು ಎಮ್‌ಎಲ್‌ಸಿಗಳ ಹೆಸರು ಸೇರ್ಪಡೆ ಮತ್ತು ಏಕಾಏಕಿ ಮೀಸಲಾತಿ ಬದಲಾವಣೆ ಪ್ರಶ್ನಿಸಿ ಮತ್ತು ಚುನಾವಣೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.
ಎಂಎಲ್‌ಸಿಗಳಾದ ಲಕ್ಷ್ಮಣ್ ಸವದಿ, ರಘುನಾಥ್ ಮಲ್ಕಾಪುರೆ ಸೇರಿದಂತೆ ಐವರು ಎಮ್‌ಎಲ್‌ಸಿಗಳ ಹೆಸರನ್ನ ಬಿಜೆಪಿಯು ಅಧಿಕಾರ ದುರುಪಯೋಗಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದನ್ನು ಮತ್ತು ಈ ಹಿಂದೆ ಮೇಯರ್ ಚುನಾವಣೆ ಘೋಷಣೆಯಾದಾಗ ಮೀಸಲಾತಿ ಮಾಡಿದ್ದನ್ನು, ಮತ್ತೆ ಬದಲಾವಣೆ ಮಾಡಿರುವುದನ್ನ ಖಂಡಿಸಿ ಕಾಂಗ್ರೆಸ್ ಪಕ್ಷ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಎರಡು ರಿಟ್ ಅರ್ಜಿಗಳನ್ನ ಸಲ್ಲಿಸಿತ್ತು.