ಕರ್ನಾಟಕ

karnataka

ETV Bharat / state

ಮಳೆ ತಂದ ವಿಪತ್ತು.. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ರೈತ - heavy rain in North karnataka

ಚಿಂಚೋಳಿ ತಾಲೂಕಿನಲ್ಲಿ ಮಳೆಯಿಂದ ಉಂಟಾದ ಅವಾಂತರ ರೈತರನ್ನು ಕಂಗಾಲಾಗಿಸಿದೆ. ಕಳೆದೆರಡು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಅದರಲ್ಲೂ ಚಿಂಚೋಳಿ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿದೆ.

By

Published : Jul 24, 2020, 11:12 PM IST

ಕಲಬುರಗಿ: ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತರು ಬೆಳೆದ ಬೆಳೆ ನೀರಲ್ಲಿ ಹೋಮ ಮಾಡಿದಂತಾಗಿದೆ. ಇನ್ನೇನು ಫಸಲು ಕೈಸೇರುವ ಹಂತದಲ್ಲಿ ವರುಣಾರ್ಭಟಕ್ಕೆ ಎಲ್ಲ ನೀರು ಪಾಲಾಗಿದೆ.

ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಮಳೆಯಿಂದ ಉಂಟಾದ ಅವಾಂತರ ರೈತರನ್ನು ಕಂಗಾಲಾಗಿಸಿದೆ. ಕಳೆದೆರಡು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಅದರಲ್ಲೂ ಚಿಂಚೋಳಿ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿದೆ.

ಧಾರಾಕಾರ ಮಳೆಯಿಂದ ತಾಲೂಕಿನ ಐನೋಳ್ಳಿ, ಬಾಸ್ಪಲ್ಲಿ, ಸಂಗ್ಯೆಮ್ಮ, ಮಿರಿಯಾಣ, ಕಲ್ಲೂರು, ಗಣಾಪುರ ಗ್ರಾಮ ವ್ಯಾಪ್ತಿಯಲ್ಲಿ ರೈತರ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರೈತರ ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಉದ್ದು, ಹೆಸರು, ಶೇಂಗಾ, ತೊಗರಿ, ಎಳ್ಳು ಬೆಳೆ ಮಳೆ ನೀರಿಗೆ ಕೊಚ್ಚಿ ಹೋಗಿವೆ.

ಮಳೆ ತಂದ ವಿಪತ್ತು...ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ರೈತ

ಚಿಂಚೋಳಿ ತಾಲೂಕಿನಲ್ಲಿಯೇ ಸುಮಾರು 600 ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಸಾಲ-ಸೂಲ ಮಾಡಿ ಬಿತ್ತನೆ ಮಾಡಿದ ರೈತರು ಎಕರೆಗೆ ಸುಮಾರು 5-6 ಸಾವಿರ ಹಣ ಖರ್ಚು ಮಾಡಿದ್ದಾರೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಅಬ್ಬರದ ಮಳೆಯಿಂದ ಬೆಳೆ ಸಂಪೂರ್ಣ ನಾಶವಾಗಿದೆ.

ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಅತೀ ಹೆಚ್ಚು ಮಳೆಯಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಬೆಳೆ ನಷ್ಟದ ಜಂಟಿ ಸರ್ವೆ ಕಾರ್ಯ ಆರಂಭಿಸಲಾಗಿದೆ.

ಒಟ್ನಲ್ಲಿ ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಜಿಲ್ಲೆಯ ಕೆಲ ರೈತರು ಮಾತ್ರ ಮಳೆರಾಯನ ರೌದ್ರಾವತಾರಕ್ಕೆ ಬೆಳೆ ಕಳೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತನ ಕಡೆ ಸರ್ಕಾರ ಶೀಘ್ರ ಗಮನಹರಿಸಬೇಕಿದೆ.

ABOUT THE AUTHOR

...view details