ಶಾಲಾ ವಿದ್ಯಾರ್ಥಿನಿಯರನ್ನು ವಿಮಾನದಲ್ಲಿ ಹಾರಾಡಿಸಿದ ಹೆಡ್ ಮಾಸ್ಟರ್ ಕಲಬುರಗಿ:ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಅಕ್ಕಪಕ್ಕದ ಜಿಲ್ಲೆ ಹೊರತುಪಡಿಸಿ ದೂರದ ಊರಿನ ಪ್ರವಾಸ ಅಂದರೆ ಕನಸು ಮಾತ್ರ. ಅದರಲ್ಲೂ ವಿಮಾನಯಾನ ಮಾಡೋದು ಹಗಲುಗನಸೇ ಸರಿ. ಆದರೆ, ಇಲ್ಲೊಂದು ಸರ್ಕಾರಿ ಶಾಲೆಯ ಮಕ್ಕಳು ವಿಮಾನಯಾನ ಮಾಡಿ ದೂರದ ಊರುಗಳನ್ನು ಸುತ್ತಾಡಿದ್ದಾರೆ. ಇದಕ್ಕೆ ಕಾರಣ ಶಾಲೆಯ ಮುಖ್ಯೋಪಾಧ್ಯಾಯರು.
ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಹೌದು, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ್ವರ ಕಟ್ಟಿಮನಿ ತಮ್ಮ ಶಾಲೆಯ 40 ವಿದ್ಯಾರ್ಥಿನಿಯರನ್ನು ವಿಮಾನದಲ್ಲಿ ದೆಹಲಿ ಪ್ರವಾಸ ಮಾಡಿಸಿ ಅವರ ಸಂತೋಷಕ್ಕೆ ಕಾರಣವಾಗಿದ್ದಲ್ಲದೇ ಉಳಿದವರಿಗೂ ಮಾದರಿಯಾಗಿದ್ದಾರೆ. ವಿದ್ಯಾರ್ಥಿನಿಯರ ಪೋಷಕರಿಂದ ಸಾಧ್ಯವಾದಷ್ಟು ಅಲ್ಪಸ್ವಲ್ಪ ಹಣ ಸಂಗ್ರಹಿಸಿ ಉಳಿದ ಹಣವನ್ನು ತಾವೇ ಭರಿಸಿ ಪ್ರವಾಸ ಮಾಡಿಸಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಈ ಶಾಲೆ ಇರುವುದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಗ್ರಾಮದಲ್ಲಿ. ಇದು ಕನ್ನಡ ಮಾಧ್ಯಮ ಶಾಲೆ. ಈ ಗ್ರಾಮ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕರ್ನಾಟಕದ ಗಡಿ ಗ್ರಾಮವಾಗಿದೆ. ಈ ಶಾಲೆಗೆ ಕಳೆದ ಒಂದೂವರೆ ವರ್ಷದ ಹಿಂದೆ ಮುಖ್ಯೋಪಾಧ್ಯಾಯರಾಗಿ ಬಂದಿರುವ ಮಹಾಂತೇಶ್ವರ ಅವರು, ಮಕ್ಕಳೊಂದಿಗೆ ಮೊದಲು ರೈಲಿನಲ್ಲಿ ಮುಂಬೈಗೆ ತೆರಳಿದ್ದರು. ನಂತರ ವಿಮಾನಯಾನ ಮೂಲಕ ದೆಹಲಿಗೆ ಕರೆದೊಯ್ದು ಸಂಸತ್ ಭವನ, ರಾಷ್ಟ್ರಪತಿ ಭವನ, ಕೆಂಪುಕೋಟೆ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ತೋರಿಸಿಕೊಂಡು ಬಂದಿದ್ದಾರೆ.
ದೆಹಲಿಯ ಕೆಂಪು ಕೋಟೆ ವೀಕ್ಷಣೆ ಕಳೆದ ವರ್ಷ ಕೂಡಾ ಮಹಾಂತೇಶ್ವರ ಅವರು ಶಾಲೆಯ ಮಕ್ಕಳನ್ನು ಇದೇ ರೀತಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಮುಖ್ಯೋಪಾಧ್ಯಾಯರ ಈ ಕಾರ್ಯಕ್ಕೆ ಮಕ್ಕಳ ಪೋಷಕರು ತುಂಬಾನೇ ಖುಷಿಪಟ್ಟಿದ್ದಾರೆ. 'ನಾವಂತೂ ವಿಮಾನದಲ್ಲಿ ಹಾರಾಡಿಲ್ಲ, ಕನಿಷ್ಠ ಪಕ್ಷ ನಮ್ಮ ಮಕ್ಕಳಾದ್ರೂ ಆಕಾಶದಲ್ಲಿ ಹಾರಾಡಿ ಖುಷಿ ಪಟ್ಟಿದ್ದಾರೆ' ಎಂದು ಮುಖ್ಯೋಪಾಧ್ಯಾಯರ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಮೈಂದರ್ಗಿ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಈ ಕುರಿತು ಮಹಾಂತೇಶ್ವರ ಕಟ್ಟಿಮನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಮಕ್ಕಳ ಸಂತೋಷವೇ ನನ್ನ ಸಂತೋಷ. ಶಾಲೆ ಜೀವಂತ ದೇವರಗುಡಿ. ಇಲ್ಲಿ ಇರುವಂತ ಮಕ್ಕಳೆಲ್ಲಾ ನಿಜವಾದ ಜೀವಂತ ದೇವರು. ಆ ಮಕ್ಕಳನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಹೋಗುವ ಕರ್ತವ್ಯ ಶಿಕ್ಷಕರದ್ದು. ಇದರ ಸಲುವಾಗಿ ನಾನು ಇದೆಲ್ಲವನ್ನೂ ಮಾಡುತ್ತಿದ್ದೇನೆ. ಮಕ್ಕಳಿಗಾಗಿ ನಾನು ಶಾಲೆಯ ನಿಧಿಯ ಹಣ ಮತ್ತು ನನ್ನ ಸ್ವಂತದ ಹಣ ಸೇರಿಸಿ ಈ ಪ್ರವಾಸ ಮಾಡಿಸಿದ್ದೇನೆ' ಎಂದು ಹೇಳಿದರು.
ಗುರುಗಳಾದ ಮಹಾಂತೇಶ್ವರ ಕಟ್ಟಿಮನಿ ಅವರು ಈ ಹಿಂದೆ ಕಾರ್ಯನಿರ್ವಹಿಸಿದ ಮೂರು ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿದ್ದರು. ಶಾಲಾ ಮಕ್ಕಳ ಖುಷಿಯಲ್ಲಿ ತಮ್ಮ ಖುಷಿ ಕಾಣುತ್ತಿರುವ ಮುಖ್ಯೋಪಾಧ್ಯಾಯರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಯೋಧ್ಯೆಯ ಶ್ರೀರಾಮನಿಗೂ ಕೊಪ್ಪಳದ ಹನುಮ ಭಕ್ತನಿಗೂ ಇದೆ ನಂಟು