ಕಲಬುರಗಿ:ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಮಕ್ಕಳಿಗೆ ಅಕ್ಕಿ ವಿತರಣೆ ಮಾಡಿದ ಹಿನ್ನೆಲೆ ಅಫಜಲ್ಪುರ ತಾಲೂಕು ಕರಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಅಪ್ಪಣ್ಣ ಕುಲಕರ್ಣಿ ಅವರನ್ನು ಅಮಾನತು ಮಾಡಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಕ್ಕಳಿಗೆ ಅಕ್ಕಿ ವಿತರಣೆ: ಹೆಡ್ ಮಾಸ್ಟರ್ ಅಮಾನತು - ಹೆಡ್ ಮಾಸ್ಟರ್ ಅಮಾನತು
ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಶಾಲಾ ಮಕ್ಕಳಿಗೆ ಅಕ್ಕಿ ವಿತರಿಸಿದ ಕರಜಗಿ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿಲಾಗಿದೆ.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬದಲು ಆಹಾರ ಧಾನ್ಯ ವಿತರಿಸುವಂತೆ ಸರ್ಕಾರ ಸೂಚನೆ ನೀಡಿದ ಹಿನ್ನೆಲೆ ಕರಜಗಿಯ ಕರ್ನಾಟಕ ಪಬ್ಲಿಕ್ ಶಾಲೆಯ 800 ಮಕ್ಕಳಿಗೆ ಏಕಾ ಏಕಿಯಾಗಿ ಆಹಾರ ಧಾನ್ಯ ವಿತರಿಸಲು ಮುಖ್ಯ ಶಿಕ್ಷಕ ಮುಂದಾಗಿದ್ರು. ಈ ವೇಳೆ 800 ಮಕ್ಕಳ ಜೊತೆಗೆ ಪೋಷಕರು ಸೇರಿ ಸಾವಿರಕ್ಕಿಂತ ಅಧಿಕ ಜನ ಅಕ್ಕಿ ಪಡೆಯಲು ಗುಂಪು ಗುಂಪಾಗಿ ಮುಗಿಬಿದ್ದಿದ್ದರು.
ಜಿಲ್ಲೆಯಲ್ಲಿ ಕರೊನಾ ವೈರಸ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತ ಕ್ರಮ ತೆಗೆದುಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಕ್ಕಿ ವಿತರಣೆ ಮಾಡಿದ ಆರೋಪದ ಮೇಲೆ ಅಫಜಲ್ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಕರ್ ದೇಗಲಮಡಿ ಅವರು ಅಪ್ಪಣ್ಣ ಕುಲಕರ್ಣಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.