ಕಲಬುರಗಿ:ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ಕೋಲಾರ ಕ್ಷೇತ್ರದಲ್ಲಿ ಅವರನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಅವರ ಪಕ್ಷದವರೇ ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಕಲಬುರಗಿಯ ಕಡಣಿ ಗ್ರಾಮದಲ್ಲಿ ಸಾಗುತ್ತಿರುವ ಪಂಚರತ್ನ ರಥ ಯಾತ್ರೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕೋಲಾರದಲ್ಲಿ ಸ್ಪರ್ಧಿಸಲು ಯಾರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯರಿಗೆ ಕೋಲಾರ ಕ್ಷೇತ್ರವಂತೂ ಸೇಫ್ ಅಲ್ಲ. ಒಂದು ವೇಳೆ ಅವರು ಅಲ್ಲೇ ಸ್ಪರ್ಧಿಸಿದರಂತೂ ಹರಕೆಯ ಕುರಿ ಆಗುವುದರಲ್ಲಿ ಸಂಶಯವಿಲ್ಲ ಎಂದರು.
ನಾನು ಕೋಲಾರದಲ್ಲಿ ಸುತ್ತಾಡಿ ಜನರ ಭಾವನೆಯನ್ನು ತಿಳಿದುಕೊಂಡಿದ್ದೇನೆ. ಅಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮತ ಪಡೆಯುವ ಶಕ್ತಿ ಇಲ್ಲ. ಅದಕ್ಕಾಗಿಯೇ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಕೋಲಾರದಲ್ಲೇ ನಿಲ್ಲಿಸಲು ಹೊರಟಿದ್ದಾರೆ. ಇನ್ನು ಅವರನ್ನು ದೇವರೇ ಕಾಪಾಡಬೇಕು ಎಂದು ನುಡಿದರು. 3ಬಿ ಮೀಸಲಾತಿಯನ್ನು 2ಡಿ ಸೇರ್ಪಡೆಗೆ ಹೈಕೋರ್ಟ್ ತಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 3ಬಿ ಯನ್ನು 2ಡಿ ಗೆ ಘೋಷಣೆ ಮಾಡಿ ಸರ್ಕಾರ ಕಣ್ಣಿಗೆ ಮಣ್ಣೆರಚಿದೆ. ಹಲವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಆದರೆ ಇವರು ಮಾತ್ರ ಮೂಗಿಗೆ ತುಪ್ಪ ಸವರದೇ ಹಣೆ ಮೇಲೆ ಸವರಿಕೊಂಡು ವಾಸನೆ ಬಾರದಂತೆ ನೋಡಿಕೊಂಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ರಂಗ ಅನ್ನೋ ಹೆಸರನ್ನು ಮಂಗ ಮಾಡಿ ದೋಖಾ ಮಾಡಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿರುವುದು ಜನಾಶೀರ್ವಾದದ ಸರ್ಕಾರವಲ್ಲ, ಅಪರೇಷನ್ ಕಮಲದ ಸರ್ಕಾರ: ಹೆಚ್ಡಿ ಕುಮಾರಸ್ವಾಮಿ