ಕಲಬುರಗಿ: ಬೆಳೆ ಹಾನಿಗೆ ಸರ್ಕಾರದಿಂದ ಪರಿಹಾರ ಬರಲಿಲ್ಲ, ಸಾಲ ಮಾಡಿದ್ದೇವೆ ಎಂದು ರೈತರು ಜೀವ ಕಳೆದುಕೊಳ್ಳಬೇಡಿ. ಇನ್ನೊಂದು ನಾಲ್ಕು ತಿಂಗಳು ಸಹಿಸಿಕೊಳ್ಳಿ. ಆ ಬಳಿಕ ನಾನೇ ನಿಮ್ಮ ಬಳಿ ಬಂದು ಕಷ್ಟ ಬಗೆಹರಿಸುತ್ತೇನೆ. ರೈತರ ಬದುಕಿಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
193 ಕೋಟಿ ರೂ ಬೆಳೆ ವಿಮೆಯ ಹಣವನ್ನು ರೈತರು ಕಟ್ಟಿದ್ದಾರೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಲ್ಲಿ ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ. ಇನ್ಸೂರೆನ್ಸ್ ಕಂಪನಿ 28 ಕೋಟಿ ರೂ ಕೊಟ್ಟಿದೆಯೇ ಹೊರತು ಅವರ ಅಪ್ಪನ ಮನೆಯಿಂದ ಕೊಡ್ತಿಲ್ಲ ಎಂದು ಮಾಜಿ ಸಿಎಂ ಗುಡುಗಿದರು.
ಕಲಬುರಗಿ ಜಿಲ್ಲೆ ನಿಡಗುಂದಾ ಗ್ರಾಮದಲ್ಲಿ ಮಾತನಾಡಿದ ಹೆಚ್ಡಿಕೆ, ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗಿವೆ. ಕಲಬುರಗಿಯಲ್ಲಿ 7 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆ ನಷ್ಟವಾಗಿ ರೈತರು ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಆದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು. ಈ ಸರ್ಕಾರದಲ್ಲಿ ಪರಿಹಾರ ಬರಲಿಲ್ಲ ಅಂದ್ರೆ ನಾಲ್ಕು ತಿಂಗಳ ಧೈರ್ಯದಿಂದ ಕಾಲ ತಳ್ಳಿ, ಆತ್ಮಹತ್ಯೆಗೆ ಶರಣಾಗಬೇಡಿ. ಆ ಬಳಿಕ ನಾನೇ ನಿಮ್ಮ ಕಷ್ಟ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಪಂ.ಸದಸ್ಯ ಮಾಡಬೇಕಾದ ಕೆಲಸಕ್ಕೆ ಪ್ರಧಾನಿ ಕರೆಸ್ತಾರೆ:ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಜ.19 ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ವಿಚಾರವಾಗಿ ಮಾತನಾಡಿದ ಹೆಎಚ್ಡಿಕೆ, ಇದು ಒಬ್ಬ ಗ್ರಾಮ ಪಂಚಾಯತ್ ಸದಸ್ಯ ಮಾಡಬೇಕಾದ ಕೆಲಸ. ಈ ಕೆಲಸಕ್ಕೆ ಪ್ರಧಾನಿಯನ್ನು ಕರೆಸುತ್ತಿದ್ದಾರೆ. ಬಿಜೆಪಿಯನ್ನು ದೇವರೇ ಕಾಪಾಡಬೇಕು. ಸಾವಿರಾರು ಕೋಟಿ ರೂ. ಯೋಜನೆಗಾಗಿ ಕರೆದುಕೊಂಡು ಬಂದಿದ್ರೆ ಒಪ್ಪಬೇಕಿತ್ತು. ಅದು ಬಿಟ್ಟು ತಾಂಡಾ ಜನರಿಗೆ ಹಕ್ಕು ಪತ್ರ ವಿತರಣೆಗೆ ಮೋದಿಯನ್ನು ಕರೆಸುತ್ತಿದ್ದಾರೆ. 60 ಎಕರೆಯಲ್ಲಿ ಬೃಹತ್ ಪೆಂಡಾಲ್ ಹಾಕಿ ಹಕ್ಕು ಪತ್ರ ಕೊಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿ:ಕುಮಾರಸ್ವಾಮಿ ಪಾರ್ಟಿ ಎಂದರೆ ಅದು 'ಫಾರ್ ದಿ ಫ್ಯಾಮಿಲಿ' 'ಆಫ್ ದಿ ಫ್ಯಾಮಿಲಿ' ಮತ್ತು 'ಬೈ ದಿ ಫ್ಯಾಮಿಲಿ' ಥರ ಎಂದು ವ್ಯಂಗ್ಯವಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕುಮಾರಸ್ವಾಮಿ ಕೆಂಡ ಕಾರಿದರು. ನಮ್ಮ ಬಗ್ಗೆ ಹಗುರವಾಗಿ ಮಾತಾಡಬೇಡಿ, ನನ್ನ ಕುಟುಂಬದ ಬಗ್ಗೆ ವ್ಯಂಗ್ಯವಾಡಬೇಡಿ, ರಾಜ್ಯದ ಆರುವರೆ ಕೋಟಿ ಜನರು ಕೂಡ ನನ್ನ ಕುಟುಂಬವೇ ಎಂದು ಹೇಳಿದರು. ಇದೇ ವೇಳೆ ಮಹದಾಯಿ ವಿಚಾರದಲ್ಲಿ ನಾನು ಏನು ಕ್ರಮ ತೆಗೆದುಕೊಂಡಿದ್ದೇನೆ ಅನ್ನೋದು ಹುಬ್ಬಳ್ಳಿಯಲ್ಲಿ ಮಾತಾಡುತ್ತೇನೆ ಎಂದು ಹೇಳಿದರು.