ಶಿವಮೊಗ್ಗ/ಕಲಬುರಗಿ: ಕೋವಿಡ್ ಆರ್ಭಟ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಮಾರಣಾಂತಿಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಏರುತ್ತಿದೆ. ಪರಿಸ್ಥಿತಿ ಎಲ್ಲಿವರೆಗೆ ತಲುಪಿದೆ ಅಂದ್ರೆ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಹಲವು ಸವಾಲುಗಳಿವೆ. ಸ್ಮಶಾನಗಳಲ್ಲಿ ಜಾಗದ ಕೊರತೆ, ಚಿತಾಗಾರಗಳ ಮುಂದೆ ಮೃತದೇಹಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳ ಕ್ಯೂ ಇದೆ. ಸದ್ಯಕ್ಕೆ ಶವಗಳನ್ನು ಸುಡುವುದಕ್ಕೆ ಉರುವಲಿನ ಸಮಸ್ಯೆ ಕಾಣಿಸಿಕೊಂಡಿಲ್ಲ.
ಹಿಂದೂ ಸಂಪ್ರದಾಯದಲ್ಲಿ ಕಟ್ಟಿಗೆಯಲ್ಲೇ ಶವಗಳನ್ನು ಸುಡೋದಕ್ಕೆ ಜನರು ಮೊದಲ ಆದ್ಯತೆ ನೀಡ್ತಾರೆ. ಹಾಗಾಗಿ ಕಟ್ಟಿಗೆಗಳ ಕೊರತೆಯಾಗದಂತೆ ರಾಜ್ಯದಲ್ಲಿ ನಿಗಾ ವಹಿಸಲಾಗಿದೆ. ಬೆಂಗಳೂರಿನಲ್ಲಿ 1,200 ಕ್ಕೂ ಹೆಚ್ಚು ಟನ್ ಕಟ್ಟಿಗೆ ಸಂಗ್ರಹವಿದ್ದು, ಸದ್ಯಕ್ಕಂತೂ ಕಟ್ಟಿಗೆ ಕೊರತೆ ಎದುರಾಗದು. ಆದ್ರೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಚಿತಾಗಾರಗಳ ಮುಂದೆ ಶವಗಳನ್ನು ಹೊತ್ತು ತಂದಿರುವ ಆ್ಯಂಬುಲೆನ್ಸ್‌ಗಳು ಸರದಿಯಲ್ಲಿ ನಿಲ್ಲಬೇಕಾದ ದುಸ್ಥಿತಿ ಇದೆ.
ಶಿವಮೊಗ್ಗದಲ್ಲಿ ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಕೊರತೆಯಾಗಲಿ, ಸ್ಥಳಾವಕಾಶದ ತೊಂದರೆ ಸದ್ಯಕ್ಕಿಲ್ಲ ಎನ್ನಬಹುದು. ಇಲ್ಲಿ ಅಂತ್ಯಕ್ರಿಯೆಗೆ ನಗರದ ರೋಟರಿ ಚಿತಾಗಾರವನ್ನೇ ಬಳಸಲಾಗುತ್ತಿದ್ದು, ಅಂತ್ಯಕ್ರಿಯೆಗೆ ಬೇಕಿರುವ ಕಟ್ಟಿಗೆಗೆ 2,100 ರೂಪಾಯಿ ಪಡೆಯಲಾಗುತ್ತಿದೆ. ಅನಿಲ ಚಿತಾಗಾರವನ್ನು ಮಹಾನಗರ ಪಾಲಿಕೆ ನಿರ್ವಹಣೆ ಮಾಡುತ್ತಿದ್ದು, ಅಂತ್ಯಸಂಸ್ಕಾರಕ್ಕೆ 1,500 ರೂ. ದರ ನಿಗದಿ ಮಾಡಿದೆ.