ಕಲಬುರಗಿ:ಅವರು ಹುಟ್ಟಿನಿಂದ ವಿಶೇಷ ಚೇತನ ಆದ್ರೂ ಸ್ವಾವಲಂಬಿ ಜೀವನದ ಛಲತೊಟ್ಟು ಬದುಕು ಕಟ್ಟಿಕೊಂಡ ವ್ಯಕ್ತಿ. ಜೀವನೋಪಾಯಕ್ಕೆಂದು ಕಂಡುಕೊಂಡ ದಾರಿಯಲ್ಲಿಯೇ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದ ವಿಶೇಷ ವ್ಯಕ್ತಿ. ನಾಟಿ ಕೋಳಿ ಫಾರಂ ಕುರಿತಾಗಿ ತರಬೇತಿ ನೀಡಿ ಆದಾಯ ಗಳಿಸೋದು ಹೇಗೆ ಅನ್ನೋದು ಜನರಿಗೆ ತಿಳಿಸಿ ಕೊಡ್ತಾರೆ. ಜೊತೆಗೆ ಖುದ್ದು ತಾವೇ ನಾಟಿ ಕೋಳಿ ಫಾರಂ ಮಾಡಿಕೊಂಡು ಒಳ್ಳೆ ಸಂಪಾದನೆ ಕೂಡಾ ಮಾಡ್ತಿದ್ದಾರೆ.
ಹೌದು, ಕಲಬುರಗಿ ನಿವಾಸಿಯಾದ ನಿತೀನ್ ರಂಗದಾಳ ಹುಟ್ಟಿನಿಂದ ದೈಹಿಕವಾಗಿ ಅಂಗವೈಕಲ್ಯತೆಯಿಂದ ಬಳಲುತ್ತಿರುವ ವ್ಯಕ್ತಿ, ಆದ್ರೂ ತಾನೊಬ್ಬ ವಿಶೇಷ ಚೇತನ ಅನ್ನೋದನ್ನು ಬದಿಗಿಟ್ಟು ಮೈಕೈ ಗಟ್ಟಿ ಇರುವ ಯುವಕರಂತೆ ಒಳ್ಳೆ ಸಾಧನೆ ಮಾಡಿ ತೋರಿಸಿದ್ದಾರೆ. ಎಸ್ಎಸ್ಎಲ್ಸಿ ವರೆಗೆ ಓದಿದ ನಿತೀನ್, ನಾಟಿ ಕೋಳಿ ಫಾರಂ ಸ್ಥಾಪಿಸುವುದು, ಅವುಗಳ ನಿರ್ವಹಣೆ, ಆದಾಯದ ಮಾರ್ಗದ ಬಗ್ಗೆ ತರಬೇತಿ ನೀಡುವ ಮೂಲಕ ತಮ್ಮ ಜೀವನದ ಜೊತೆಗೆ ಇತರರ ಜೀವನ ಕಟ್ಟುವ ಕೆಲಸ ಮಾಡುತ್ತಿದ್ದಾರೆ.
147 ನಾಟಿ ಕೋಳಿ ಫಾರಂ: ಕರ್ನಾಟಕ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿ ಇವರ ಮಾರ್ಗದರ್ಶನದಲ್ಲಿ ಈಗಾಗಲೇ 147 ನಾಟಿ ಕೋಳಿ ಫಾರಂಗಳು ಕಾರ್ಯನಿರ್ವಹಿಸುತ್ತಿವೆ. ಕಡಿಮೆ ಖರ್ಚಿನಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡಿ ಉತ್ತಮ ಲಾಭ ಪಡೆಯುವದರ ಬಗ್ಗೆ ಆಸಕ್ತರಿಗೆ ತರಬೇತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಯ್ಲರ್ ಕೋಳಿಗಿಂತ ನಾಟಿ ಕೋಳಿ ಆರೋಗ್ಯಕ್ಕೆ ಒಳ್ಳೆಯ ಆಹಾರ. ಹೀಗಾಗಿ ನಾಟಿ ಕೋಳಿ ಉತ್ಪನ್ನ ಹೆಚ್ಚಿಸುವುದರ ಜೊತೆಗೆ ನಿರುದ್ಯೋಗಿಗಳು ಸ್ವಯಂ ಉದ್ಯೋಗಸ್ಥರಾಗಲು ಇದೊಂದು ಉತ್ತಮ ಮಾರ್ಗ, ಹೀಗಾಗಿ ತರಬೇತಿ ನೀಡುವ ಕೆಲಸ ಮಾಡ್ತಿದ್ದೇನೆ ಅನ್ನೋ ಮಾತು ನಿತೀನ್ ಅವರದ್ದು.