ಕರ್ನಾಟಕ

karnataka

ETV Bharat / state

ಲೋಕ ಸಮರ: ಕಲಬುರಗಿಯಲ್ಲಿ ಗುರು-ಶಿಷ್ಯನ ಕಾಳಗದಲ್ಲಿ ಯಾರಿಗೆ ಜಯ...? - Kalaburagi

ಗುರು-ಶಿಷ್ಯನ ಮಧ್ಯೆ ನೇರ ಪೈಪೋಟಿ. ಕ್ಷೇತ್ರದಲ್ಲಿ ಶುರುವಾಗಿದೆ ಸೋಲು-ಗೆಲುವಿನ ಲೆಕ್ಕಾಚಾರ. ಯಾರಿಗೆ ಸಿಹಿ-ಕಹಿ?

ಗುರು ಶಿಷ್ಯನ ಕಾಳಗದಲ್ಲಿ ವಿಜಯಲಕ್ಷ್ಮಿ ಯಾರಿಗೆ

By

Published : May 4, 2019, 4:31 AM IST

ಕಲಬುರಗಿ: ಹೈವೋಲ್ಟೇಜ್ ಕಣವಾದ ಕಲಬುರಗಿ ಲೋಕಸಭೆ ಚುನಾವಣೆ ಮತದಾನ ಸುಸೂತ್ರವಾಗಿ ಮುಗಿದ ಮೇಲೆ ಈಗ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಮೇ 23 ರಂದು ಬರಲಿರುವ ಫಲಿತಾಂಶ‌ ಯಾರ ಪರವಾಗಿರಲಿದೆ ಎಂದು ಕ್ಷೇತ್ರದ ಜನ ಲೆಕ್ಕಾಚಾರ ಮಾಡುತ್ತಿದ್ದಾರೆ.

ಗುರು ಶಿಷ್ಯನ ಕಾಳಗದಲ್ಲಿ ವಿಜಯಲಕ್ಷ್ಮಿ ಯಾರಿಗೆ

ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೆ, ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ ಜಾಧವ್ ರಾಜೀನಾಮೆ ನೀಡಿ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದರು. ಒಂದು ಕಾಲದಲ್ಲಿ ಖರ್ಗೆ ಅವರ ಶಿಷ್ಯ ಎಂದು ಹೇಳಲಾಗ್ತಿದ್ದ ಜಾಧವ ತಮ್ಮ ಗುರು ಖರ್ಗೆ ವಿರುದ್ಧ ಸಡ್ಡು ಹೊಡೆದಿದ್ದರಿಂದ ಗುರು-ಶಿಷ್ಯರ ನಡುವೆ ನೇರಾನೇರ ಪೈಪೋಟಿ ಏರ್ಪಟ್ಟಿದೆ.

ಈಗ ಚುನಾವಣೆ ಮತದಾನ ಮುಗಿದಿದ್ದು ಇಬ್ಬರು ನಾಯಕರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಈಗ ಜನರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಎರಡು ಪಕ್ಷದವರು ಗೆಲ್ಲಲೆಬೇಕೆಂದು ಬಿರುಸಿನ ಪ್ರಚಾರ ಕೈಗೊಂಡಿದ್ದರು. ಆದ್ರೆ ಬಿಜೆಪಿಯವರಿಗೆ ಆರಂಭದಲ್ಲಿದ್ದ ಉತ್ಸಾಹ ಕೊನೆಗಳಿಗೆಯಲ್ಲಿ ಕಾಣಲಿಲ್ಲ ಹೀಗಾಗಿ ಟಫ್ ಆಗಿದ್ದ ಕಾಂಪಿಟೇಶನ್ ಕೊನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಿಸಿ ಕೊಟ್ಟಿದೆ ಎನ್ನಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಸುಮಾರು 70 ಸಾವಿರದಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಅರಳಿಕಟ್ಟೆಯಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ.

ಗುಲ್ಬರ್ಗಾ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಕಲಬುರಗಿ ಗ್ರಾಮೀಣ ವಿಧಾನಸಭೆ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಚಿತ್ತಾಪೂರ, ಸೇಡಂ, ಜೇವರ್ಗಿ, ಅಫಜಲಪೂರ ಮತ್ತು ಯಾದಗಿರಿ ಜಿಲ್ಲೆಯ ಗುರುಮಿಟಕಲ್ ಸೇರಿ ಒಟ್ಟು 8 ವಿಧಾನಸಭೆ ಮತಕ್ಷೇತ್ರಗಳು ಒಳಪಡುತ್ತವೆ. ಕ್ಷೇತ್ರದಲ್ಲಿ ಒಟ್ಟು19,20,977 ಮತದಾರರಿದ್ದು, ಇದರಲ್ಲಿ 11,84,241 ಲಕ್ಷ ಮತ ಚಲಾವಣೆಗೊಂಡಿವೆ. ಸರಾಸರಿ 60.88% ಶೇಖಡಾವಾರು ಮತ ಚಲಾವಣೆಯಾದಂತಾಗಿದೆ. ಇದು ಯಾವ ಪಕ್ಷದ ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿದೆ ಎಂಬ ಲೆಕ್ಕಾಚಾರ ಸದ್ಯ ಜನರದಾಗಿದೆ.

ವಿಧಾನಸಭಾ ಕ್ಷೇತ್ರವಾರು ಮತ ಚಲಾವಣೆಯ ಕುರಿತು ಲೆಕ್ಕಾಚಾರ:

ಅಫಜಲಪೂರ ಹಾಗೂ ಜೇವರ್ಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮಬಲದಂತೆ ಕಂಡುಬಂದಿದ್ದು, ಮೂರ್ನಾಲ್ಕು ಸಾವಿರ ಮತಗಳ ಅಂತರ ಮಾತ್ರ ನಿರೀಕ್ಷಿಸಲಾಗುತ್ತಿದೆ. ಅಫಜಲಪೂರ-1,39,268 (ಶೇ.62.54) ಮತ್ತು ಜೇವರ್ಗಿ-1,46,165 (ಶೇ.61.87) ಮತದಾನವಾಗಿದೆ. ಮಾಲಿಕಯ್ಯ ಗುತ್ತೇದಾರ ಅವರ ವರ್ಚಸ್ಸಿನ ಹಿನ್ನೆಲೆ ಕಾಂಗ್ರೆಸ್ ಲೀಡ್ ಸಾಧಿಸಲು ಸಾಧ್ಯವಾಗದಿದ್ರೂ ಸಮಬಲ ಕಾಯ್ದುಕೊಳ್ಳಲಿದೆ ಎನ್ನಲಾಗುತ್ತಿದೆ.

ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವುದು ಕೈ ಅಭ್ಯರ್ಥಿಗೆ ಹೆಚ್ಚಿನ ಮತ ನಿರೀಕ್ಷೆ ಮಾಡಲಾಗುತ್ತಿದೆ. ಉತ್ತರ ಕ್ಷೇತ್ರದಲ್ಲಿ 1,57,029 (ಶೇ.56.89) ಮತ ಚಲಾವಣೆಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ 25 ಸಾವಿರ ಮತಗಳ ಲೀಡ್ ಸಿಗುವ ಸಾಧ್ಯತೆಗಳಿವೆ.

ಕಲಬುರಗಿ ಗ್ರಾಮೀಣದಲ್ಲಿ ಬಿಜೆಪಿ ಶಾಸಕರಿದ್ದರೂ ಬಿಜೆಪಿಯಿಂದ ಅಬ್ಬರದ ಪ್ರಚಾರ ನಡೆದಿಲ್ಲ. ಮೇಲಾಗಿ ಎಸ್ಸಿ ಮಿಸಲು ಕ್ಷೇತ್ರವಾದ್ದರಿಂದ ಎಸ್ಸಿ ಮತದಾರರ ಬಲ ಹೆಚ್ಚಿದೆ. ದಲಿತ ಸಮುದಾಯಕ್ಕೆ ಸೇರಿದ ಖರ್ಗೆ ಅವರಿಗೆ ಹೆಚ್ಚಿನ ಬಲ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಗ್ರಾಮೀಣ ಕ್ಷೇತ್ತದಲ್ಲಿ ಒಟ್ಟು 1,53,856 (ಶೇ.60.82) ಮತದಾನವಾಗಿದ್ದು, 5 ರಿಂದ 10 ಸಾವಿರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಸಿಗಲಿದೆ. ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಬ್ರಾಹ್ಮಣ ಹಾಗೂ ವೀರಶೈವ ಲಿಂಗಾಯತ ಮತದಾರರ ಬಲ ಹೆಚ್ಚಿದೆ. ಒಟ್ಟು 1,51,269 (ಶೇ.57.04) ಮತದಾನವಾಗಿದ್ದು, ಬ್ರಾಹ್ಮಣ ಸಮುದಾಯದ ಮತಗಳು ಬಿಜೆಪಿಗೆ ಬಂದರೆ ವೀರಶೈವ ಲಿಂಗಾಯತ ಮತಗಳು ಎರಡು ಪಕ್ಷಗಳತ್ತ ಹಂಚಿ ಹೋಗಿರುವ ಲೆಕ್ಕಾಚಾರ ಇದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ 3 ರಿಂದ 5 ಸಾವಿರ ಮತಗಳ ಮುನ್ನಡೆ ಕಾಂಗ್ರೆಸ್ ಪಕ್ಷಕ್ಕೆ ಸಿಗಬಹುದೆಂಬ ಲೆಕ್ಕಾಚಾರ ವಿಶ್ಲೇಷಕರದ್ದಾಗಿದೆ.

ಸೇಡಂ ವಿಧಾನಸಭೆ ಮತಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದು ಕರೆಸಿಕೊಂಡಿದೆ. ಖರ್ಗೆ ಅವರ ಪಟ್ಟಾ ಶಿಷ್ಯ ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಮೂರುಬಾರಿ ಗೆಲವು ಸಾಧಿಸಿದ ಕ್ಷೇತ್ರವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕ ಅನುಕಂಪದಲ್ಲಿ ಗೆದ್ದು ಬಂದಿದ್ದರಾದರೂ ಇಂದಿಗೂ ಸೇಡಂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿಯೇ ಉಳಿದಿದೆ. ಈ ಕ್ಷೇತ್ರದಲ್ಲಿ 1,47,844 (ಶೇ.68.33) ಮತದಾನವಾಗಿದ್ದು, 10 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಖರ್ಗೆ ಅವರಿಗೆ ಸಿಗಲಿದೆ ಎನ್ನುವ ಲೆಕ್ಕಾಚಾರ ಮಾಡಲಾಗುತ್ತಿದೆ.

ಚಿತ್ತಾಪೂರ ವಿಧಾನಸಭಾ ಮತಕ್ಷೇತ್ರವಂತೂ ಖರ್ಗೆ ಅವರ ಪುತ್ರ ಹಾಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರವಾಗಿದೆ. ಹೀಗಾಗಿ ಅಲ್ಲಿಯೂ 15 ಸಾವಿರ ಮತ ಲೀಡ್ ಕಾಂಗ್ರೆಸ್ ಪಕ್ಷಕ್ಕೆ ಬರಲಿದೆಯಂತೆ. ಚಿತ್ತಾಪೂರದಲ್ಲಿ 1,41,032 (ಶೇ.61.15) ಮತದಾನವಾಗಿದೆ. ಕೊನೆಯದಾಗಿ ಯಾದಗಿರ ಜಿಲ್ಲೆ ಗುರುಮಿಠಕಲ್ ಕ್ಷೇತ್ರದ ವಿಶ್ಲೇಷಣೆಯತ್ತ ಗಮನ ಹರಿಸಿದರೆ, ಇದೆ ಗುರುಮಿಠಕಲ್ ವಿಧಾನಸಭಾ ಮತಕ್ಷೇತ್ರದಿಂದ‌ ಹಿಂದೆ ಖರ್ಗೆ ಸ್ಪರ್ಧಿಸುತ್ತಿದ್ದರು. ಈ ಕ್ಷೇತ್ರ ಖರ್ಗೆ ಅವರಿಗೆ ತವರು ಮನೆ ಇದ್ದಂತ್ತಿದೆ. ಮೇಲಾಗಿ ಮೈತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ಶಾಸಕರಿರುವ ಹಿನ್ನೆಲೆ ಇಲ್ಲಿ ಕಾಂಗ್ರೆಸ್ ಲೀಡ್ ಬರಬಹುದು. ಆದ್ರೆ ಮಾಜಿ ಸಚಿವ ಬಾಬುರಾವ ಚಿಂಚನಸೂರ ಮತ್ತು ಮಾಲಕರಡ್ಡಿ ಬಿಜೆಪಿ ಪರವಾಗಿ ಬಿರುಸಿನ ರಣತಂತ್ರ ರೂಪಿಸಿದ್ದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆ ಸಿಗದಿದ್ದರೂ 5 ರಿಂದ 8 ಸಾವಿರ ಮತಗಳ ಲೀಡ್ ಸಿಗುವ ಲಕ್ಷಣಗಳು ಕಂಡುಬರುತ್ತಿದೆ. ಗುರುಮಿಠಕಲ್ ಕ್ಷೇತ್ರದಲ್ಲಿ 1,47,778 (ಶೇ.60.26) ಮತದಾನವಾಗಿದೆ.

ಒಟ್ಟಿನಲ್ಲಿ ಸೋಲರಿಯದ ಸರದಾರನ ಯಾತ್ರೆ ಮುಂದುವರಿಯಲಿದೆ ಎಂಬ ಲೆಕ್ಕಾಚಾರದ ಸಮೀಕ್ಷೆಗಳು ಜನರ ಬಾಯಲ್ಲಿ ಹರಿದಾಡುತ್ತಿವೆ. ಇಲ್ಲಿ ಇನ್ನೊಂದು ಗಮನಾರ್ಹ ವಿಷಯ ಅಂದ್ರೆ ಬಂಜಾರ ಸಮುದಾಯದ ಉಮೇಶ ಜಾಧವ್​​ ತಮ್ಮ ಸಮುದಾಯದ ಮತಗಳನ್ನು ಕ್ರೂಢೀಕರಿಸಲು ಸಾಕಷ್ಟು ಪ್ರಯತ್ನಿಸಿದರು. ಇದನ್ನು ಕಂಡ ದಲಿತ ಸಮುದಾಯವರು ತಮ್ಮ ಒಳಬೇಗುದಿ ಮರೆತು ತಮ್ಮ ಸಮುದಾಯದ ಖರ್ಗೆ ಪರವಾಗಿ ನಿಂತಿದ್ದಾರಂತೆ. ಇದು ಜಾಧವ ಅವರಿಗೆ ಪೆಟ್ಟು ಬೀಳಲು ಪ್ರಮುಖವಾಗಲಿದೆ ಎನ್ನಲಾಗುತ್ತಿದೆ‌. ಈ ವಿಶ್ಲೇಷಣೆ ಎಷ್ಟರ ಮಟ್ಟಿಗೆ ಸತ್ಯವಾಗಲಿದೆ. ಯಾವ ಅಭ್ಯರ್ಥಿಗೆ ವಿಜಯದ ಮಾಲೆ ಬೀಳಲಿದೆ ಅನ್ನೋ ಸ್ಪಷ್ಟ ಚಿತ್ರಣ ಮೇ.23ರಂದು ಬಹಿರಂಗವಾಗಲಿದೆ.

For All Latest Updates

TAGGED:

Kalaburagi

ABOUT THE AUTHOR

...view details