ಸೇಡಂ(ಕಲಬುರಗಿ):ಒಂದೆಡೆ ಅಮ್ಮನಿಲ್ಲದ ಮೊದಲ ಗುರುಪೂರ್ಣಿಮೆ, ಅಂದೇ ಆ ಮಹಾತಾಯಿ ಮಾಣಿಕೇಶ್ವರಿ ಅಮ್ಮನ ಜನುಮದಿನ. ಇನ್ನೊಂದೆಡೆ ಕೊರೊನಾ ಮಹಾಮಾರಿಯ ರುದ್ರನರ್ತನ. ಈ ಮಧ್ಯೆ ಲಕ್ಷಾಂತರ ಜನರಿಂದ ದೇಶದ ಕೇಂದ್ರಬಿಂದುವಾಗಿ ಕಂಗೊಳಿಸುತ್ತಿದ್ದ ಯಾನಾಗುಂದಿಯ ಬೆಟ್ಟ ಇಂದು ಮೌನವಾಗಿತ್ತು.
ಲಾಕ್ಡೌನ್ ಹಿನ್ನೆಲೆಯಲ್ಲಿ ಯಾರೂ ಸಹ ಬೆಟ್ಟಕ್ಕೆ ಬರದಂತೆ ಪೊಲೀಸ್ ಇಲಾಖೆ ಮೊದಲೇ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಆದರೂ ಸಹ ಭಕ್ತರು ಆಗಮಿಸುವ ಆತಂಕದ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹೀಗಾಗಿ ಟ್ರಸ್ಟಿಗಳು ಹೊರತುಪಡಿಸಿ ಯಾರೂ ಸಹ ಬೆಟ್ಟದತ್ತ ಸುಳಿದಿರಲಿಲ್ಲ ಎನ್ನಲಾಗಿದೆ.
ಮಾತೆ ಮಾಣಿಕೇಶ್ವರಿಗೆ ಹತ್ತು ಜನರ ಸಮ್ಮುಖದಲ್ಲಿ ಪೂಜೆ ಆದರೆ ಪ್ರತಿ ವರ್ಷ ಯಾನಾಗುಂದಿಯ ಬೆಟ್ಟದ ಗುಹೆಯ ಹೊರಭಾಗದ ಗ್ಯಾಲರಿಯಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರ ಸ್ಥಳದಲ್ಲೇ ಪಾರಿವಾಳವೊಂದು ನಿರಂತರ ಪೂಜೆ ಮುಗಿಯುವವರೆಗೂ ಮಳೆಯಲ್ಲೂ ಕದಲದೇ ಕುಳಿತಿತ್ತು. ಇದನ್ನು ಕಂಡ ಟ್ರಸ್ಟಿಗಳು ಮಾತಾ ಮಾಣಿಕೇಶ್ವರಿ ಅಮ್ಮನವರು ಪಾರಿವಾಳದ ರೂಪದಲ್ಲಿ ದರ್ಶನ ನೀಡಿದ್ದಾರೆಂದು ನಮಿಸಿದರು.
ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಲಕ್ಷಾಂತರ ಭಕ್ತರನ್ನು ಮಾತಾ ಮಾಣಿಕೇಶ್ವರಿ ಅಮ್ಮನವರು ಹೊಂದಿದ್ದಾರೆ. ಅನ್ನ, ನೀರು ಇಲ್ಲದೆ ವಿಜ್ಞಾನ ಲೋಕಕ್ಕೆ ಸವಾಲಾಗಿ, ಜೀವ ಸಂಕುಲದ ಒಳಿತಿಗಾಗಿ ಅಹಿಂಸೆಯ ತತ್ವವನ್ನು ಸಾರುವ ಮೂಲಕ ಭಕ್ತಸಾಗರದ ಆಶಾದೀಪವಾಗಿದ್ದರು. ಆದರೇ ಇದೇ ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ 87ನೇ ವರ್ಷಕ್ಕೆ ಮಾತಾ ಮಾಣಿಕೇಶ್ವರಿ ದೇಹ ತ್ಯಜಿಸಿ ಸರ್ವಾಂತರ್ಯಾಮಿಯಾಗಿದ್ದರು. ಈಗ ಅವರ ಮೊದಲ ಜನುಮ ದಿನ ಗುರುಪೂರ್ಣಿಮೆಯ ಪುಣ್ಯದಿನವನ್ನು ಕೇವಲ 10 ಸ್ವಾಮೀಜಿಗಳ ನೇತೃತ್ವದಲ್ಲಿ ಆಚರಿಸಲಾಗಿದೆ. ಇಂದು ಅಮ್ಮನವರ ಪಾದುಕೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಟ್ರಸ್ಟಿಗಳಾದ ಶಿವಯ್ಯಸ್ವಾಮಿ, ಮಂದಾರಯ್ಯ, ಸಿದ್ರಾಮಪ್ಪ ಸಣ್ಣೂರ, ಬಾಲದೇಶಪಾಂಡೆ, ಮೌಲಾಲಿ ಅನಪೂರ, ನಂದೀಶ್ವರ ಸ್ವಾಮಿ, ಬಂಗಾರಕೃಷ್ಣ, ಗೌರಯ್ಯಚಾರ್ಯ, ಅಮೀನಾಬೇಗಂ, ಹಣಮಂತ ಮಡ್ಡಿ, ಕಿಷ್ಟಪ್ಪ, ಸಾಯಿರೆಡ್ಡಿ, ಶರಣಪ್ಪ, ಸತ್ತಯ್ಯ, ಶರಣಪ್ಪ ಎಳ್ಳಿ ಇನ್ನಿತರರು ಈ ವೇಳೆ ಇದ್ದರು. ಡಿವೈಎಸ್ಪಿ ಈ.ಎಸ್. ವೀರಭದ್ರಯ್ಯ, ಸಿಪಿಐ ರಾಜಶೇಖರ ಹಳಗೋದಿ, ಪಿಐ ಆನಂದರಾವ, ಪಿಎಸ್‌ಐ ಸಂತೋಷ ರಾಠೋಡ, ತಿಮ್ಮಯ್ಯ, ಶಿವಶಂಕರ ಸಾಹು, ಉಪೇಂದ್ರ, ವಿದ್ಯಾಶ್ರೀ, ದಿವ್ಯಾ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.