ಕಲಬುರಗಿ:ಗುಲಬರ್ಗಾ ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಇಂದು ನಡೆದ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಆಲಗೂಡ ಮೂಲದ ಎಂ.ಎ ಕನ್ನಡ ವಿಭಾಗದ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ 14 ಚಿನ್ನದ ಪದಕ ಪಡೆದು ವಿವಿಯಲ್ಲಿಯೇ ಅತೀ ಹೆಚ್ಚು ಚಿನ್ನದ ಪದಕ ಪಡೆದ ಕೀರ್ತಿಗೆ ಪಾತ್ರರಾದರು.
ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ರುಕ್ಮಿಣಿ, "ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನ ಮತ್ತು ತಂದೆ-ತಾಯಿ ಹಾಗೂ ಕುಟುಂಬಸ್ಥರ ಸಹಕಾರವೇ ಕಾರಣ. ವಿವಿಯಲ್ಲಿನ ಗ್ರಂಥಾಲಯಗಳು ನನ್ನ ನೆರವಿಗೆ ಬಂತು" ಎಂದರು. "ಬಿ.ಎಡ್. ಕೂಡಾ ಮಾಡಿದ್ದರಿಂದ ಈಗಾಗಲೇ ಶಿಕ್ಷಕಿ ಹುದ್ದೆಗೆ ಆಯ್ಕೆಯಾಗಿದ್ದು, ಇನ್ನಷ್ಟೇ ನೇಮಕಾತಿ ಪತ್ರ ಬರಬೇಕಿದೆ. ಶಿಕ್ಷಕ ವೃತ್ತಿಯಲ್ಲಿ ಮುಂದೆ ಸಾಗುವೆ" ಎಂದು ಸಂತಸ ವ್ಯಕ್ತಪಡಿಸಿದರು.
ಮಗಳ ಈ ಸಾಧನೆ ಕಂಡು ತಂದೆ ಹಣಮಂತ್ರಾಯ ಭಾವುಕರಾದರು. ನಂತರ ಮಾತನಾಡಿ, "ನಾನು 3ನೇ ತರಗತಿಯವರೆಗೆ ಓದಿದ್ದೇನೆ. ನನಗೆ 4 ಜನ ಹೆಣ್ಮಕ್ಳು, ಒಬ್ಬ ಹುಡುಗ ಇದ್ದಾನೆ. ರುಕ್ಮಿಣಿ ಕೊನೆಯವಳು. ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಪಿವನ್ ಆಗಿ ಎರಡು ವರ್ಷದ ಹಿಂದೆ ರಿಟೈರ್‍ಮೆಂಟ್ ಆಗಿದ್ದೀನಿ. ಮಗಳು ಚೆನ್ನಾಗಿ ಓದಿದ್ದಾಳೆ" ಎಂದು ಖುಷಿಪಟ್ಟರು.
ಮೂವರಿಗೆ ಗೌರವ ಡಾಕ್ಟರೇಟ್:ಶಿಲ್ಪಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಕಲಬುರಗಿ ಜಿಲ್ಲೆಯ ನಾಡೋಜ ಮಾನಯ್ಯ ಬಡಿಗೇರ್, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ತಾತ್ಯಾರಾವ ಕಾಂಬ್ಳೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಬೆಂಗಳೂರು ಮೂಲದ ಎನ್.ಎಸ್.ಶ್ರೀನಾಥ ಅವರಿಗೆ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯ ಅತಿಥಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ 26,590 ಸ್ನಾತಕ ಪದವಿ, 4,171 ಸ್ನಾತಕೋತ್ತರ ಪದವಿ ಸೇರಿ 30,761 ವಿದ್ಯಾರ್ಥಿಗಳಿಗೆ ಪದವಿ ಘೋಷಿಸಲಾಯಿತು. 129 ಅಭ್ಯರ್ಥಿಗಳಿಗೆ ಪಿಹೆಚ್ಡಿ ಹಾಗೂ 72 ವಿದ್ಯಾರ್ಥಿಗಳಿಗೆ 165 ಚಿನ್ನದ ಪದಕ, 23 ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕವನ್ನು ನಗದು ಬಹುಮಾನಕ್ಕೆ ಪರಿವರ್ತಿಸಿ ವಿತರಿಸಲಾಯಿತು.