ಕಲಬುರಗಿ: ಗುಲ್ಬರ್ಗಾ ವಿವಿ ಆವರಣದಲ್ಲಿ ಆಯೋಜಿಸಿದ್ದ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಅವರ ಕಾರ್ಯಕ್ರಮವನ್ನು ಮತ್ತೆ ದಿಢೀರ್ ರದ್ದು ಮಾಡಲಾಗಿದ್ದು, ವಿಶ್ವವಿದ್ಯಾಲಯ ಆವರಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಗುಲ್ಬರ್ಗಾ ವಿವಿಯಲ್ಲಿ ಕನ್ಹಯ್ಯ ಕಾರ್ಯಕ್ರಮ ರದ್ದು, ಸೆಕ್ಷನ್ 144 ಜಾರಿ: ಸರ್ಕಾರದ ವಿರುದ್ಧ ಆಕ್ರೋಶ - Section 144 enforcement of university premises in kalaburagi
ಗುಲ್ಬಾರ್ಗಾ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 15ರಂದು ಕನ್ಹಯ್ಯ ಕುಮಾರ್ ಅವರೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದ್ದು, ವಿವಿಯಲ್ಲಿ 144 ಸೆಕ್ಷನ್ ಕೂಡಾ ಜಾರಿಗೊಳಿಸಲಾಗಿದೆ. ಸರ್ಕಾರದ ಈ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ವ ನಿಗದಿಯಂತೆ ಅಕ್ಟೋಬರ್ 15ರಂದು 11 ಗಂಟೆಗೆ ವಿಶ್ವವಿದ್ಯಾಲಯ ಆವರಣದ ಅಂಬೇಡ್ಕರ್ ಭವನದಲ್ಲಿ "ಸಂವಿಧಾನದ ರಕ್ಷಣೆ ಯುವ ಜನತೆಯ ಹೊಣೆ" ವಿಷಯವಾಗಿ ಉಪನ್ಯಾಸ ಹಾಗೂ ಸಂವಾದ ನಡೆಯಬೇಕಿತ್ತು. ಆದರೆ, ವಿವಿ ಆಡಳಿತ ಮಂಡಳಿ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳು ಕುಲಪತಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿತ್ತು. ಪ್ರತಿಭಟನೆಗೆ ಮಣಿದ ವಿವಿ, ಸಿಂಡಿಕೇಟ್ ಸಭೆ ನಡೆಸಿ ಷರತ್ತು ವಿಧಿಸಿ ಅನುಮತಿ ನೀಡಿತ್ತು.
ಈಗ ರಾತ್ರೋರಾತ್ರಿ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿ ರದ್ದು ಮಾಡಿ, ವಿವಿ ಆವರಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಕನ್ಹಯ್ಯ ಕುಮಾರ್ ಸಂವಾದ ಕಾರ್ಯಕ್ರಮ ಈಗ ವಿಶ್ವೇಶ್ವರಯ್ಯ ಭವನಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.