ಕಲಬುರಗಿ:ಐತಿಹಾಸಿಕ ಕಲಬುರಗಿ ಕಂಪು ಕಾರ್ಯಕ್ರಮದ ಬಳಿಕ ಇದೀಗ 12 ವರ್ಷಗಳ ನಂತರ ಮತ್ತೊಂದು ಅದೇ ಮಾದರಿಯಲ್ಲಿ 'ಕಲ್ಯಾಣ ಕರ್ನಾಟಕ ಉತ್ಸವ' ಕಾರ್ಯಕ್ರಮ ನಡೆಸೋದಕ್ಕೆ ಸರ್ಕಾರ ಮನಸ್ಸು ಮಾಡಿದೆ. ಕಲ್ಯಾಣ ಕರ್ನಾಟಕದ ಕಲೆ, ಸಂಸ್ಕೃತಿ, ಸ್ಥಳೀಯ ಪರಂಪರೆ ಅನಾವರಣಗೊಳಿಸಲು ಮೂರು ದಿನಗಳ “ಕಲ್ಯಾಣ ಕರ್ನಾಟಕ ಉತ್ಸವ” ವನ್ನು ಇದೇ ಫೆಬ್ರವರಿ 24 ರಿಂದ 26ರ ವರೆಗೆ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಗುಲಬರ್ಗಾ ವಿ.ವಿ. ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿಯೇ ಉತ್ಸವ ನಡೆಯಲಿದೆ. 100x60 ಚದುರ ಅಡಿ ಮುಖ್ಯ ವೇದಿಕೆ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ವಿ.ವಿ ಬಯಲು ರಂಗಮಂದಿರದಲ್ಲಿ ಎರಡು ಉಪ ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳಿಗೆ ಅನಕೂಲ ಕಲ್ಪಿಸಲಾಗುತ್ತಿದೆ.
ಮೂರು ದಿನಗಳ ಉತ್ಸವ ಆಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದ್ದರಿಂದ ಕಾರ್ಯಕ್ರಮ ಐತಿಹಾಸಿಕವಾಗುವಂತೆ ಮಾಡಬೇಕು ಎಂದು ಗುರುವಾರ ಉತ್ಸವ ಯಶಸ್ಸಿಗೆ ರಚನೆ ಮಾಡಿರುವ ವಿವಿಧ ಸಮಿತಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಅನಿರುದ್ಧ ಶ್ರವಣ ಅವರು ಅಧಿಕಾರಿಗಳಿಗೆ ತಮ್ಮ ತಮ್ಮ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸೂಚಿಸಿದ್ದಾರೆ.
ಈ ಉತ್ಸವಕ್ಕೆ ದೇಶದ ಹಲವಡೆಯಿಂದ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು, ಬಾಲಿವುಡ್ ಮತ್ತು ಸ್ಯಾಂಡಲ್‍ವುಡ್ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ಊಟ, ವಸತಿ, ಸಾರಿಗೆ ಹೀಗೆ ಪ್ರತಿಯೊಂದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಲಾಗಿದೆ. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಉತ್ಸವಕ್ಕೆ ಸಂಪೂರ್ಣ ಖರ್ಚು - ವೆಚ್ಚವನ್ನು ಮಂಡಳಿ ಭರಿಸಲಿದೆ ಎಂದು ಅನಿರುದ್ಧ ಶ್ರವಣ ಸ್ಪಷ್ಟಪಡಿಸಿದ್ದಾರೆ.
ಗಮನ ಸೆಳೆಯಲಿರುವ ಪ್ರದರ್ಶನಗಳು:ಉತ್ಸವದ ನಿಮಿತ್ತ ಶ್ವಾನಗಳ ಪ್ರದರ್ಶನ, ಕೃಷಿ ಮೇಳ, ಮಕ್ಕಳ ಮತ್ತು ಮಹಿಳೆಯರ ಹಬ್ಬ, ಗಾಳಿಪಟ ಉತ್ಸವ, ಚಿತ್ರಕಲೆ ಮತು ಶಿಲ್ಪ ಕಲೆಗಳ ಕಾರ್ಯಾಗಾರ, ಫಲಪುಷ್ಪ ಪ್ರದರ್ಶನ, ಚಿತ್ರ ಸಂತೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕುಸ್ತಿ, ಮಲ್ಲಕಂಬ ಸೇರಿದಂತೆ ಗ್ರಾಮೀಣ ಮತ್ತು ಸಾಹಸ ಕ್ರೀಡೆಗಳು ಹಾಗೂ ಜಲ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ.