ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಿಂಗ್ ಪಿನ್ ದಿವ್ಯಾ ಹಾಗರಗಿ ಜಾಮೀನಿನ ಮೇಲೆ ಹೊರಬಂದಿದ್ದು, ಅದ್ಧೂರಿ ಸ್ವಾಗತ ಕೋರಲಾಯಿತು. ಶುಕ್ರವಾರ ರಾತ್ರಿ ಜೈಲಿನಿಂದ ಬಿಡುಗಡೆಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪಿಎನ್‌ಟಿ ಕ್ರಾಸ್ ಬಳಿ ಇರುವ ಮನೆಗೆ ಆಗಮಿಸಿದ್ದಾರೆ. ದಿವ್ಯಾ ಹಾಗರಗಿ ಮನೆ ಮುಂದೆ ಬರುತ್ತಿದ್ದಂತೆ ಆಕಾಶದೆತ್ತರಕ್ಕೆ ಹಾರುವ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಲ್ಲದೆ, ಹಾರ ತೂರಾಯಿ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ. ದಿವ್ಯಾ ಹಾಗರಗಿ ಜೈಲಿನಿಂದ ಬಿಡುಗಡೆಯಾದ ಬಳಿಕ ಜೈಲಿನ ಬಳಿಯೇ ಕೆಲ ಬಿಜೆಪಿಯ ಉಚ್ಚಾಟಿತ ನಾಯಕರು ಸ್ವಾಗತ ಕೋರಿದರು.
ಬಳಿಕ ಮನೆ ಹತ್ತಿರ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಮತ್ತು ಅಭಿಮಾನಿ ಬಳಗದವರು ಅದ್ಧೂರಿಯಾಗಿ ಬರಮಾಡಿಕೊಂಡರು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 9 ತಿಂಗಳಿನಿಂದ ಜೈಲಿನಲ್ಲಿದ್ದ ದಿವ್ಯಾ ಹಾಗರಿಗಿ ಯನ್ನು ಜನವರಿ 5 ರಂದು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಅಂದು ದಿವ್ಯಾ ಹಾಗರಗಿ ಸೇರಿ 27 ಜನರನ್ನು ನ್ಯಾಯಾಲಯ ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ 545 ಪಿಎಸ್ಯ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದ ಹಿನ್ನೆಲೆ ಅಕ್ರಮದ ಕೇಂದ್ರ ಬಿಂದುವಾಗಿರುವ ದಿವ್ಯಾ ಹಾಗರಿಗಿ ವಿರುದ್ಧ 2022ರ ಏಪ್ರಿಲ್ 10ರಂದು ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರ ಆಧಾರದಲ್ಲಿ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಮನೆಗೆ ಸಿಐಡಿ ದಾಳಿ ಮಾಡಿತ್ತು.
ಅದರಲ್ಲೂ ದಿವ್ಯಾ ಹಾಗರಗಿ ಅವರಿಗೆ ಸೇರಿದ, ಅವರು ಅಧ್ಯಕ್ಷೆ ಆಗಿರುವ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಅಕ್ರಮ ನಡೆದಿತ್ತು. ಶಾಲೆಯಲ್ಲಿ ಪರೀಕ್ಷಾ ಅಕ್ರಮಕ್ಕೆ ಸಹಕರಿಸಿದ್ದ ಇತರ ಆರೋಪಿಗಳನ್ನು ಬಂಧಿಸಲಾಗಿದ್ದರೂ, ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದರು. ಅವರ ಪತಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಮನೆ ಪರಿಶೀಲನೆ ವೇಳೆ ಅಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಸಿಐಡಿ ವಶಕ್ಕೆ ಪಡೆದಿದ್ದರು.