ಕಲಬುರಗಿ:ತನಿಖೆ ಮುಗಿಯೋ ಮುಂಚೆಯೇ ಮರು ಪರೀಕ್ಷೆ ಎಂದು ಪ್ರಕರಣ ಮುಚ್ಚಿಹಾಕೋ ಪ್ರಯತ್ನ ನಡೆದಿದೆ. ಪಿಎಸ್ಐ ಅಕ್ರಮ ನಡೆದಿರುವುದು ಕಲಬುರಗಿಯಲ್ಲಿ ಅಷ್ಟೇ ಅಲ್ಲ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಲ್ಲೂ ನಡೆದಿದೆ. ಈ ಬಗ್ಗೆ ಸಿಐಡಿ ಅವರಿಗೂ ಮಾಹಿತಿ ಇದೆ. ಇದೇ ವಿಚಾರವಾಗಿ ಅಭ್ಯರ್ಥಿಗಳು ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನೂರಾರು ಜನ ಇರಬಹುದು. ತನಿಖೆ ನಡೆಯಲಿ ತನಿಖೆಗೂ ಮುನ್ನವೇ ಮರು ಪರೀಕ್ಷೆ ಘೋಷಿಸುವುದು ಸರಿಯಲ್ಲ. ದಿವ್ಯ ಹಾಗರಗಿ ಬಂಧನ ಸರ್ಕಾರದ ದೊಡ್ಡ ಸಾಧನೆ ಏನಲ್ಲ. ಸಂಪೂರ್ಣ ತನಿಖೆ ಯಾವ ದಿಕ್ಕಿನಲ್ಲಿ ಹೋಗಿದೆ ಅಂತಾ ಗೃಹ ಮಂತ್ರಿಗಳಿಗೆ ಅರಿವಿಲ್ಲ ಎನಿಸುತ್ತಿದೆ. ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಬಂಧನ ಇದು ತನಿಖೆ ಹಂತದ ಪ್ರಥಮ ಪ್ರಯತ್ನ. ಹಣ ವರ್ಗಾವಣೆ ಬಗ್ಗೆ ಮಾಹಿತಿ ಎಲ್ಲಿದೆ ಎಂದು ಪ್ರಶ್ನಿಸಿದರು.