ಕಲಬುರಗಿ: ಪೋಷಕರ ಒಪ್ಪಿಗೆ ಇಲ್ಲದೆ ಆಗುವ ಪ್ರೇಮ ವಿವಾಹಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಇಲ್ಲಿನ ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತಕುಮಾರ ಕೆ. ಮೂಲಗೆ ಹಾಗೂ ಸದಸ್ಯರು ಸಭೆ ನಡೆಸಿ ಠರಾವು ಪಾಸ್ ಮಾಡಿದ್ದಾರೆ. ಅಕ್ಟೋಬರ್ 10 ರಂದು ಶಾಂತಕುಮಾರ್ ಮೂಲಗೆ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಸಾಮಾನ್ಯ ಸಭೆ ನಡೆದಿತ್ತು. ವಿಶೇಷವಾಗಿ, ಪ್ರೇಮ ವಿವಾಹಗಳ ಬಗ್ಗೆ ಚರ್ಚಿಸಲೆಂದೇ ಈ ಸಭೆ ಕರೆಯಲಾಗಿತ್ತು.
ಪೋಷಕರ ಒಪ್ಪಿಗೆ ಇಲ್ಲದ ಪ್ರೇಮ ವಿವಾಹಗಳನ್ನು ಸರ್ಕಾರ ನಿಷೇಧಿಸಬೇಕು: ಗ್ರಾಮ ಪಂಚಾಯತ್ ಠರಾವು! - ಪ್ರೇಮ ವಿವಾಹ
ಪ್ರೇಮಿಗಳು ಹೆತ್ತವರ ಒಪ್ಪಿಗೆ ಪಡೆದೇ ವಿವಾಹವಾಗಬೇಕು. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಡೋಂಗರಗಾಂವ್ ಗ್ರಾಮಸ್ಥರು ಆಗ್ರಹಿಸಿದರು.
Published : Oct 16, 2023, 9:19 PM IST
ಶಾಂತಕುಮಾರ ಕೆ. ಮೂಲಗೆ ಮಾತನಾಡಿ, "ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡೋಂಗರಗಾವ್, ಕಾಳಮಂದರಗಿ ಸೇರಿದಂತೆ ನಾಲ್ಕು ತಾಂಡಾಗಳಿದ್ದು, ಈ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಹದಿನೈದು ಪ್ರೇಮ ವಿವಾಹಗಳು ನಡೆದಿವೆ. ಅನೇಕರು ಹೆತ್ತವರ ವಿರೋಧದ ನಡುವೆ ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ಅಥವಾ ಯೌವನದಲ್ಲಿ ಆತುರಕ್ಕೆ ಬಿದ್ದು ಏನೂ ತಿಳಿಯದೆ ಪ್ರೇಮ ವಿವಾಹ ಆಗುವುದರಿಂದ ಎರಡು ಕುಟುಂಬಗಳ ನಡುವೆ ಕಲಹವುಂಟಾಗಿ ಗಲಾಟೆಯಾಗುತ್ತಿವೆ. ಅಲ್ಲದೆ ಮದುವೆ ಮಾಡಿಕೊಂಡವರಲ್ಲಿ ಬಹುತೇಕರು ಮುಂದಿನ ಕೆಲ ದಿನಗಳಲ್ಲಿಯೇ ಹೊಂದಾಣಿಕೆ ಆಗದೇ ಜೀವನದ ದಿಕ್ಕು ತಪ್ಪುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು ಸೇರಿ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡಿದ್ದೇವೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ಘಟಪ್ರಭಾ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಪ್ರಕರಣ : ಬೆಳಗಾವಿ ಎಸ್ಪಿ ಹೇಳಿದ್ದಿಷ್ಟು!