ಸೇಡಂ:ಕೋವಿಡ್ ಸಂಕಷ್ಟದಲ್ಲೂ ಸಹ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ, ರಾಜ್ಯದ ಜನರಿಗೆ ಸಹಕಾರಿಯಾಗಿ ಕೆಲಸ ಮಾಡಿದೆ ಎಂದು ಉಪ ಮುಖ್ಯಮಂತ್ರಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮತ್ತು ಅಡಿಗಲ್ಲು ನೆರವೇರಿಸಲಾಯಿತು ಪಟ್ಟಣದ ಸುವರ್ಣ ಸೌಧದಲ್ಲಿ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮತ್ತು ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರ್ಕಾರ ಪ್ರವಾಹದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ 5 ಲಕ್ಷ ವೆಚ್ಚದ ಮನೆ ನಿರ್ಮಿಸಿಕೊಟ್ಟು ಮಾದರಿ ಎನಿಸಿಕೊಂಡಿದೆ. ಪ್ರವಾಹ ಹಾನಿ ಸರ್ವೆ ಕಾರ್ಯ ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಡಿಎಂಎಫ್ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ಸೇಡಂ, ಚಿಂಚೋಳಿ, ಚಿತ್ತಾಪೂರ ವ್ಯಾಪ್ತಿಯಲ್ಲಿ 2309 ಕೋಟಿ ಅನುದಾನ ನೀಡಲಾಗಿದೆ ಎಂದರು.
ನಬಾರ್ಡ್ ಅಡಿ 176 ಪ್ರಾಥಮಿಕ ಶಾಲೆಗಳ ನಿರ್ಮಾಣ ಯೋಜನೆ ರೂಪಿಸಲಾಗುತ್ತಿದೆ. ಈ ಮೂಲಕ ಗುಲಾಮಗಿರಿಯಿಂದ ಬಳಲಿದ ಈ ಭಾಗವನ್ನು ಮುಂಚೂಣಿ ಸ್ಥಾನದಲ್ಲಿ ತರುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ ಮಾತನಾಡಿ, ಜನರ ಋಣದಲ್ಲಿರುವ ರಾಜಕಾರಣಿಗಳು ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಜನರ ಕಲ್ಯಾಣ ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಜನರ ಕನಸುಗಳನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಕಾಗಿಣಾ ನದಿಗೆ 2 ಟಿಎಂಸಿ ನೀರಿನ ಅವಶ್ಯಕತೆ ಇದ್ದು, ಈ ಬಗ್ಗೆ ಉಪ ಮುಖ್ಯಮಂತ್ರಿಗಳು ಗಮನಹರಿಸಬೇಕು. ಏತ ನೀರಾವರಿ ಯೋಜನೆಯನ್ನು ಈ ಭಾಗದಲ್ಲಿ ಜಾರಿಗೊಳಿಸಬೇಕು. ಮುಧೋಳದಲ್ಲಿ 100 ಬೆಡ್‌ಗಳ ಕೋವಿಡ್ ಆಸ್ಪತ್ರೆಗೆ ಚಾಲನೆ ದೊರೆತಿದೆ ಎಂದು ಪ್ರಾಸ್ತಾವಿಕ ಭಾಷಣದಲ್ಲಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ಇದೇ ವೇಳೆ ಕೋವಿಡ್ ವಿರುದ್ಧ ಸಮರ್ಥವಾಗಿ ಕೆಲಸ ಮಾಡಿದ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಸಿಪಿಐ ರಾಜಶೇಖರ ಹಳಗೋದಿ, ಆನಂದರಾವ, ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಂಸದ ಡಾ. ಉಮೇಶ ಜಾಧವ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿ.ಪಂ ಅಧ್ಯಕ್ಷ ಸುವರ್ಣ ಮಲಾಜಿ, ಜಿಲ್ಲಾಧಿಕಾರಿ ಶರತ ಬಿ, .ಜಿ.ಪಂ ಸಿಇಒ ಡಾ. ಪಿ. ರಾಜಾ, ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಎಎಸ್ಪಿ ಪ್ರಸನ್ನಕುಮಾರ ದೇಸಾಯಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕಾಶ, ಸಹಾಯಕ ಆಯುಕ್ತ ರಮೇಶ ಕೋಲಾರ, ಆರ್.ಎಲ್. ವೆಂಕಟೇಶ, ಚಂದ್ರಶೇಖರ ಮೋತಕಪಲ್ಲಿ ಇದ್ದರು.