ಕಲಬುರಗಿ: ಭಕ್ತರ ಮೇಲೆ ಪುಡಿ ರೌಡಿ ಅಟ್ಟಹಾಸ ಮೆರೆದಿರುವ ವಿಚಾರವಾಗಿ ಪಿಎಸ್ಐ ತಲೆದಂಡವಾಗಿದೆ. ಕಲಬುರಗಿ ಜಿಲ್ಲೆ ದೇವಲ ಗಾಣಗಾಪುರ ಠಾಣೆ ಪಿಎಸ್ಐ ಅಮಾನತು ಮಾಡಿ ಈಶಾನ್ಯ ವಲಯ ಐಜಿಪಿ ಅನುಪಮ್ ಅಗರವಾಲ್ ಆದೇಶ ಹೊರಡಿಸಿದ್ದಾರೆ. ಅಫಜಲಪುರ ತಾಲೂಕಿನ ದೇವಲಗಾಣಗಾಪುರ ದತ್ತಾತ್ರೇಯ ಸಂಗಮ ದೇವಸ್ಥಾನದಲ್ಲಿ ಪುಡಿರೌಡಿ ಯಲ್ಲಪ್ಪ ಕಲ್ಲೂರ ಎಂಬಾತ ಭಕ್ತರ ಮೇಲೆ ಅಟ್ಟಹಾಸ ಮೆರೆದಿದ್ದ. ಹಲ್ಲೆ ಮಾಡಿ ತೆಲೆ ಮೇಲೆ ಕಾಲಿಟ್ಟು ದೌರ್ಜನ್ಯ ಮೆರೆದಿದ್ದ. ಈತ ಮುಂಚೆಯೂ ಹೀಗೆ ವರ್ತಿಸಿದ್ದ ಪ್ರಕರಣ ಕೂಡಾ ದಾಖಲಾಗಿದ್ದವು.
ಆದರೆ ಭಕ್ತರ ಮೇಲೆ ದೌರ್ಜನ್ಯ ಮೆರೆದ ಪುಡಿರೌಡಿ ಮೇಲೆ ಕ್ರಮ ಕೈಗೊಳ್ಳುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ PSI ಅಯ್ಯಣ್ಣ ಅವರನ್ನು ಅಮಾನತು ಮಾಡಲಾಗಿದೆ. ದತ್ತನ ಭಕ್ತರ ತಲೆ ಮೇಲೆ ಕಾಲು ಇಟ್ಟು ಹಲ್ಲೆ ಮಾಡಿದಾಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮೇಲಾಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ. ಮಾಧ್ಯಮದಲ್ಲಿ ವರದಿ ಬಂದ ಮೇಲೆ ಯಲ್ಲಪ್ಪನನ್ನು ಬಂಧಿಸಲಾಗಿತ್ತು. ಮೇಲಾಧಿಕಾರಿಗಳಿಗೆ ಮಾಹಿತಿಯೂ ನೀಡದೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ PSI ಅಯ್ಯಣ್ಣ ಅಮಾನತು ಆಗಿದ್ದಾರೆ.
ಎರಡು ದಿನಗಳ ಹಿಂದೆ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರ ಮೇಲೆ ಪುಡಿರೌಡಿಯೊಬ್ಬ ಅಟ್ಟಹಾಸ ಮೆರೆದ ಘಟನೆ ನಡೆದಿತ್ತು. ಭಕ್ತರ ತಲೆಯ ಮೇಲೆ ಕಾಲು ಇಟ್ಟು ದರ್ಪ ತೋರಿದ್ದನು. ದೇಶದ ಮೂಲೆ ಮೂಲೆಗಳಿಂದ ಭಕ್ತರು ಗಾಣಗಾಪುರ ದೇವಸ್ಥಾನಕ್ಕೆ ಬರುವುದರಿಂದ, ಭಕ್ತರು ದೇವಸ್ಥಾನದಲ್ಲೇ ವಾಸ್ತವ್ಯ ಹೂಡುತ್ತಾರೆ. ಹೀಗೆ ದೇವಸ್ಥಾನದಲ್ಲಿ ರಾತ್ರಿ ವೇಳೆ ಮಲಗಿದ್ದ ಭಕ್ತರ ಮೇಲೆ ಸ್ಥಳೀಯ ನಿವಾಸಿ ಯಲ್ಲಪ್ಪ ಕಲ್ಲೂರ್ ಎಂಬಾತ ದಬ್ಬಾಳಿಕೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಭಕ್ತರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ತಲೆ ಮೇಲೆ ಕಾಲಿಟ್ಟು ಹಲ್ಲೆ ಕೂಡ ಮಾಡಿದ್ದಾನೆ.