ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹಲವೆಡೆ ಮತ್ತೆ ಭೂಕಂಪನವಾಗಿದೆ. ನಿರಂತರವಾಗಿ ಭೂಮಿ ನಡುಗುತ್ತಿರುವ ಹಿನ್ನೆಲೆಯಲ್ಲಿ ಗಡಿಕೇಶ್ವರ ಗ್ರಾಮಸ್ಥರು ಎರಡನೇ ದಿನವೂ ಗಂಟುಮೂಟೆ ಕಟ್ಟಿಕೊಂಡು ಗ್ರಾಮ ತೊರೆಯೋಕೆ ಮುಂದಾಗಿದ್ದಾರೆ.
ಆದ್ರೆ ಕೆಲವು ಕೃಷಿಕ ಕುಟುಂಬಗಳು, ಜಾನುವಾರುಗಳನ್ನು ತೆಗೆದುಕೊಂಡು ನಾವು ಎಲ್ಲಿಗೆ ಹೋಗೋದು?, ನಮಗೆ ಇಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ನಿನ್ನೆ ಶೇ 50ರಷ್ಟು ಕುಟುಂಬಗಳು ಗ್ರಾಮ ತೊರೆದಿವೆ. ಇಂದು ಕೂಡ ಸುಮಾರು ಶೇ 25ರಷ್ಟು ಕುಟುಂಬಗಳು ಊರು ಬಿಡುತ್ತಿದ್ದಾರೆ. ಈಗಾಗಲೇ ಒಟ್ಟು 75 ಪ್ರತಿಶತದಷ್ಟು ಜನರು ಗ್ರಾಮ ಬಿಟ್ಟಿದ್ದಾರೆ. ಕೆಲವರು ಗಂಟುಮೂಟೆ ಕಟ್ಟಿಕೊಂಡು ಸಂಬಂಧಿಕರ ಮನೆಗೆ ತೆರಳಿದರೆ, ಇನ್ನೂ ಕೆಲವರು ಪಟ್ಟಣ ಸೇರಿಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಆದರೆ, ಗ್ರಾಮದಲ್ಲಿರುವ ದೊಡ್ಡದೊಡ್ಡ ಕೃಷಿಕ ಕುಟುಂಬಗಳು ಮಾತ್ರ ಜಾನುವಾರುಗಳು ಕಟ್ಟಿಕೊಂಡು ಗ್ರಾಮ ಬಿಡೋದಕ್ಕೆ ಆಗಲ್ಲ. ನಮಗೆ ತಾತ್ಕಾಲಿಕ ಶೆಡ್ ಹಾಗೂ ಕಾಳಜಿ ಕೇಂದ್ರ ನಿರ್ಮಿಸಿಕೊಡಿ ಎಂದು ಆಗ್ರಹಿಸುತ್ತಿದ್ದಾರೆ.
ವಿಜ್ಞಾನಿಗಳ ಭೇಟಿ: ಇದೆಲ್ಲದರ ಮಧ್ಯೆ ಗ್ರಾಮಸ್ಥರ ಆತಂಕ ದೂರ ಮಾಡಲು ಬೆಂಗಳೂರಿನಿಂದ ವಿಜ್ಞಾನಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಲು ಸರ್ಕಾರ ಮುಂದಾಗಿದೆ. ಆದರೆ ಗ್ರಾಮಸ್ಥರು ಮಾತ್ರ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.