ಕಲಬುರಗಿ:ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಹಣ ಹಂಚಿಕೆ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದಾರೆ. ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಹತಾಶೆಗೊಂಡು ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
ನಿನ್ನೆ (ಸೋಮವಾರ) ರಾತ್ರಿ ಖುದ್ದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹಣ ಹಂಚಿದ್ದಾರೆಂದು ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಆರೋಪ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಶಾಂತಿ ಹಾಳು ಮಾಡೋದು, ಬೆದರಿಕೆ ಹಾಕೋದನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಜನತೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದನ್ನು ಸಹಿಸಲಾಗದೆ ಕಾಂಗ್ರೆಸ್ನವರು ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ನಮ್ಮ ಕಾರ್ಯಕರ್ತ ಶಿವಾನಂದ ಹುಲಿ ಮೇಲೆ ಹಲ್ಲೆ ಮಾಡಿದ್ದಾರೆ. ಚುನಾವಣೆ ಗೆಲ್ಲುವ ಮುಂಚೆಯೇ ಕಾಂಗ್ರೆಸ್ ಪಕ್ಷ ಗೂಂಡಾ ಪ್ರವೃತ್ತಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಕಾರ್ಯಕರ್ತರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ನವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಕಾರ್ಯಕರ್ತರಿಗೆ ಪೋನ್ ಮೂಲಕ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾರ್ಯಕರ್ತರ ಮಧ್ಯೆ ನಡೆದ ಸಂಭಾಷಣೆ ಅಡಿಯೋ ಬಾಂಬ್ ಸಿಡಿಸಿದ ದತ್ತಾತ್ರೇಯ ಪಾಟೀಲ್ ಈ ಆಡಿಯೋ ತನಿಖೆ ನಡೆಸಲು ಪೊಲೀಸರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಗೂಂಡಾಗಿರಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.