ಕಲಬುರಗಿ: ಬದುಕು ಕಟ್ಟಿಕೊಳ್ಳಬೇಕು ಅಂತಾ ಆತ ಹಳ್ಳಿ ಬಿಟ್ಟು ಸಿಟಿ ಸೇರಿದ್ದ. ಸ್ನೇಹಿತ ಕಷ್ಟದಲ್ಲಿದ್ದಾನೆಂದು ತನ್ನ ಹೊಲವನ್ನೇ ಮಾರಿ ಸ್ನೇಹಿತನಿಗೆ ಹಣ ಕೊಟ್ಟ. ಆದರೆ, ಕೊಟ್ಟ ಹಣ ವಾಪಸ್ ಕೇಳಿದಾಗ ನಡೆದಿದ್ದು ಮಾತ್ರ ದುರಂತ. ಹಣ ಹಿಂದಿರುಗಿಸಬೇಕಾದ ಸ್ನೇಹಿತನ ಪ್ರಾಣವನ್ನೇ ತೆಗೆದ.
ಕೊಲೆಗೂ ಮುನ್ನ ₹20 ಲಕ್ಷದ ಇನ್ಸೂರೆನ್ಸ್ ಮಾಡಿಸಿ ರಸ್ತೆ ಅಪಘಾತ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದ. ಸ್ನೇಹಿತನ ಕೊಲೆ ರೋಚಕ ಕಥೆಯ ಅಸಲಿಯತ್ತು ಇದೀಗ ಪೊಲೀಸರು ಬಯಲಿಗೆಳಿದಿದ್ದಾರೆ.
ಕಳೆದ ಏಪ್ರಿಲ್ 7ರಂದು ಕಲಬುರಗಿ ಹೊರವಲಯದ ಶಹಬಾದ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಮೃತಪಟ್ಟ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿದ ಪೊಲೀಸರಿಗೆ ಆತ ಜೇವರ್ಗಿ ತಾಲೂಕಿನ ಗಂವ್ಹಾರ್ ಗ್ರಾಮದ ಕಂಠೆಪ್ಪ ಎಂದು ಗೊತ್ತಾಯಿತು.
ಕಂಠೆಪ್ಪ ಗಂವ್ಹಾರ್ ಗ್ರಾಮದಲ್ಲಿ ತನ್ನ ಮೂರು ಎಕರೆ ಜಮೀನಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಕೃಷಿ ಮಾಡಿಕೊಂಡಿದ್ದ. ಬಳಿಕ ಹಳ್ಳಿ ಬಿಟ್ಟು ಕಲಬುರಗಿ ಸಿಟಿ ಸೇರಿದ್ದ. ಕಲಬುರಗಿ ನಗರದ ನೃಪತುಂಗ ಕಾಲೋನಿಯಲ್ಲಿ ತನ್ನ ಸ್ನೇಹಿತನ ಮನೆಯಲ್ಲೆ ಬಾಡಿಗೆ ಮನೆ ಮಾಡಿಕೊಂಡು ಪೇಂಟಿಂಗ್ ಕೆಲಸ ಹಾಗೂ ಹೋಟೆಲ್ಗಳಿಗೆ ಹಾಲು ಹಾಕುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ.
ನಾಳೆ ಊರಿಗೆ ಬರುತ್ತೇನೆ ಎಂದಿದ್ದ ಕಂಠೆಪ್ಪ :ಏಪ್ರಿಲ್ 7ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಪೇಂಟಿಂಗ್ ಕೆಲಸ ಮಾಡಿದ್ದ ಕಂಠೆಪ್ಪ, ಸಂಜೆ ಹಾಲು ಹಾಕೋಕೆ ಹೋಗಿದ್ದ. ಹೋಗುವ ಮುನ್ನ ಹೆಂಡತಿಗೆ ಕರೆ ಮಾಡಿ ನಾಳೆ ಊರಿಗೆ ಬರೋದಾಗಿ ಹೇಳಿದ್ದ. ಬಳಿಕ ಹಾಲು ಹಾಕೋದಕ್ಕೆ ಅಂತಾ ಶಹಬಾದ್ ರಸ್ತೆಯ ಕಡೆ ಹೋಗಿದ್ದಾಗ ದುಷ್ಕರ್ಮಿಗಳು ತಮ್ಮ ಪ್ಲಾನ್ ಪ್ರಕಾರ ಕೊಲೆ ಮಾಡಿ ಅಲ್ಲಿಂದ ಕಾಲು ಕಿತ್ತಿದ್ದರು. ಇತ್ತ ಗಂಡ ಮನೆಗೆ ಬರ್ತಾರೆ ಅಂತಾ ಕಾಯುತ್ತ ಕುಳಿತಿದ್ದ ಹೆಂಡತಿಗೆ ಗಂಡನ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಯಿತು.
ಹೆಂಡತಿ ಅನುಮಾನ ನಿಜವಾಯ್ತು :ಕಂಠೆಪ್ಪನನ್ನು ಕೊಲೆ ಮಾಡಿದ ಬಳಿಕ ಅದನ್ನು ಅಪಘಾತ ಎಂಬಂತೆ ಬಿಂಬಿಸೋದಕ್ಕೆ ಕಿರಾತಕರು ಆತನ ಬೈಕ್ ರಸ್ತೆ ಪಕ್ಕದಲ್ಲಿ ಬಿಸಾಡಿ ಡ್ಯಾಮೇಜ್ ಮಾಡಿದ್ದರು. ಅಪಘಾತ ಆದಾಗ ಏನೆಲ್ಲ ಗಾಯ ಆಗುತ್ತೋ ಹಾಗೆ ಕಂಠೆಪ್ಪನ ಮೈ ಮೇಲೆ ಗಾಯಗಳನ್ನ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಆದರೆ, ಇದು ಅಪಘಾತವಲ್ಲ ಕೊಲೆ ಎಂದು ಕುಟುಂಬಸ್ಥರು ಅನುಮಾನ ಪಟ್ಟು ಗುಲ್ಬರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸೋದಕ್ಕೆ ಮುಂದಾಗಿದ್ದರು.