ಸೇಡಂ: ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಇಲ್ಲಿನ ತೇಲ್ಕೂರ ಪಾಟೀಲ ಫೌಂಡೇಷನ್ ಮತ್ತು ಬಸವೇಶ್ವರ ಶಿಕ್ಷಣ ಸಮಿತಿಯ ಹೆರಿಟೇಜ್ ಪಬ್ಲಿಕ್ ಶಾಲೆ ಮುಂದಾಗಿವೆ.
ಕಳೆದ ತಿಂಗಳಿಂದ ಮಹಾಮಾರಿಯ ಆರ್ಭಟಕ್ಕೆ ತತ್ತರಿಸಿದ್ದ ಜನತೆಗೆ ಉಚಿತ ಆಂಬುಲೆನ್ಸ್ ಸೇವೆ ಕಲ್ಪಿಸಲಾಗಿತ್ತು. ಜತೆಗೆ ಪ್ರತಿನಿತ್ಯ ಲಾಕ್‌ಡೌನ್ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಗೆ ಪ್ರತಿನಿತ್ಯ ಆಹಾರ, ಹಣ್ಣು, ಡ್ರೈ ಫ್ರೂಟ್ಸ್ ನೀಡುವ ಮೂಲಕ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದ ಇಲ್ಲಿನ ತೇಲ್ಕೂರ ಪಾಟೀಲ ಫೌಂಡೇಷನ್, ಮಹಾತ್ಮ ಬಸವೇಶ್ವರ ಶಿಕ್ಷಣ ಸಮಿತಿಯ ಹೆರಿಟೇಜ್ ಪಬ್ಲಿಕ್ ಶಾಲೆ ಈಗ ಮತ್ತೊಂದು ಮಹತ್ತರ ಹೆಜ್ಜೆಯಿಡಲು ಮುಂದಾಗಿವೆ.
ಕೋವಿಡ್ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ತೆಲ್ಕೂರ ಫೌಂಡೇಷನ್ ಅಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಅನೀಲಕುಮಾರ ಪಾಟೀಲ ತೇಲ್ಕೂರ ಘೋಷಿಸಿದ್ದಾರೆ.