ಕಲಬುರಗಿ :ಹಣ ಡಬ್ಲಿಂಗ್ ಆಸೆಗೆ ಬಿದ್ದು ಏಳು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ವಿಶೇಷ ಚೇತನ ವ್ಯಕ್ತಿಯೋರ್ವ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನು. ಆದರೆ, ಪೊಲೀಸ್ ಅಧಿಕಾರಿಗಳು ಆತನಿಂದಲೇ ಹಣ ಪೀಕಿ ಟಾರ್ಚರ್ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ.
ಹಣ ಡಬ್ಲಿಂಗ್ ಆಸೆಯಿಂದ ದುಡ್ಡು ಕಳೆದುಕೊಂಡ ವಿಶೇಷ ಚೇತನ ನಗರದ ಆಶ್ರಯ ಕಾಲೋನಿ ನಿವಾಸಿ ಪರಮಾನಂದ ಎಂಬುವರು ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಈ ನಡುವೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಮೂಲದ ನೂರಂದಯ್ಯ ಎನ್ನುವ ವ್ಯಕ್ತಿ ಪರಮಾನಂದಗೆ ಪರಿಚಯವಾಗಿದ್ದಾನೆ. ಕಡು ಬಡತನದಲ್ಲಿ ಬದುಕುತ್ತಿರುವ ಪರಮಾನಂದಗೆ ಹಣ ಡಬ್ಲಿಂಗ್ ಮಾಡಿಸಿಕೊಡುವುದಾಗಿ ನೂರಂದಯ್ಯ ನಂಬಿಸಿದ್ದಾನೆ.
ಹಣದಾಸೆಗೆ ಬಿದ್ದ ವಿಶೇಷಚೇತನ ಪರಮಾನಂದ ಆರಂಭದಲ್ಲಿ ಸಾವಿರಾರು ರೂಪಾಯಿ ಕೊಟ್ಟಿದ್ದಾರೆ. ಅದಕ್ಕೆ ನೂರಂದಯ್ಯ ಡಬಲ್ ಹಣ ಕೊಟ್ಟು ನಂಬಿಕೆ, ಭರವಸೆ ಮೂಡಿಸಿದ್ದಾನೆ. ಹಣ ಡಬಲ್ ಆಗುತ್ತೆ ಬೇಗ ಶ್ರೀಮಂತನಾಬೇಕು ಅಂತಾ ಪರಮಾನಂದ ಬರೋಬ್ಬರಿ ಏಳು ಲಕ್ಷ ಹಣವನ್ನು ನೂರಂದಯ್ಯಗೆ ಕೊಟ್ಟಿದ್ದಾನೆ. ಲಕ್ಷ ಲಕ್ಷ ದುಡ್ಡು ಕೈಗೆ ಸಿಗುತ್ತಿದ್ದಂತೆ ನೂರಂದಯ್ಯ ಹಣದ ಜೊತೆಗೆ ಪರಾರಿಯಾಗಿದ್ದಾನೆ.
ಇತ್ತ ಹಣ ಕಳೆದುಕೊಂಡು ಕಂಗಾಲಾದ ವಿಕಲಚೇತನ ಪರಮಾನಂದ ನ್ಯಾಯಕ್ಕಾಗಿ ಕಲಬುರಗಿ ಚೌಕ್ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ, ಕೇಸ್ ದಾಖಲಿಸಿಕೊಳ್ಳದೆ ಉಲ್ಟಾ ಪರಮಾನಂದನಿಗೆ ಪೊಲೀಸರು ಮನಬಂದಂತೆ ಹೊಡೆದು ಹಿಂಸೆ ಮಾಡಿದ್ದಾರಂತೆ. ಜೊತೆಗೆ ಠಾಣೆಯಿಂದ ಹೊರ ಬಿಡಲು 80 ಸಾವಿರ ರೂ. ಪಡೆದಿದ್ದಾರಂತೆ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ದೂರು ಕೊಟ್ಟರೆ ಸುಮ್ಮನೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹಣ ಕಳೆದುಕೊಂಡ ವಿಶೇಷಚೇತನ ವ್ಯಕ್ತಿ ಪರಮಾನಂದ ಆರೋಪಿಸಿದ್ದಾರೆ.
ಪೊಲೀಸ್ ಟಾರ್ಚರ್ನಿಂದ ಕಂಗಾಲಾಗಿರೋ ಪರಮಾನಂದ, ವಂಚನೆ ಕುರಿತಂತೆ ಸಿಟಿ ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಅವರಿಗೂ ದೂರು ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿಕಲಚೇತನನಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸೀಗಬೇಕು. ಆತನನ್ನು ಹಿಂಸಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ರೆ ಹೋರಾಟ ಮಾಡೋದಾಗಿ ಪೊಲೀಸ್ ಇಲಾಖೆಗೆ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೊಟ್ಟ ಸಾಲ ಕೇಳಿದ್ದಕ್ಕೆ ಅಪಪ್ರಚಾರ: ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ತಾಯಿ ಆತ್ಮಹತ್ಯೆ