ಕಲಬುರಗಿ : ತಡರಾತ್ರಿ ಜಿಲ್ಲೆಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಅಫಜಲಪುರ ಪಟ್ಟಣದ ಹೊರವಲಯದ ನೀರಾವರಿ ಕಚೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ವರ್ಷದ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಸಂತೋಷ್ ಗೌಡಗಾಂವ (40) ಜೀಪ್ ಚಾಲಕ, ಶಂಕರ ಜಳಕಿ (55), ಇವರ ಪತ್ನಿ ಸಿದ್ದಮ್ಮ ಜಳಕಿ, ಮೊಮ್ಮಗ ಹುಚ್ಚಪ್ಪ ದೊಡ್ಡಮನಿ (5) ಮೃತರಾಗಿದ್ದು, ಮಗುವಿನ ತಾಯಿ ಪೂಜಾ ದೊಡ್ದಮನಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೂಜಾ ದೊಡ್ಡಮನಿ ತನ್ನ ಗಂಡನ ಜೊತೆ ಜಗಳವಾಡಿ ಇಂಡಿ ತಾಲೂಕಿನ ಸುರಗಿಹಳ್ಳಿ ಗ್ರಾಮದಿಂದ ರಾತ್ರಿ ಹೊತ್ತು 5 ವರ್ಷದ ಮಗುವನ್ನು ಕರೆದುಕೊಂಡು ತನ್ನ ತವರುಮನೆ ಮಾಡ್ಯಾಳ ಗ್ರಾಮಕ್ಕೆ ಬರುತ್ತಿದ್ದರು. ಮಗಳನ್ನು ಕರೆಯಲೆಂದು ತಂದೆ - ತಾಯಿ ಅಫಜಲಪುರಕ್ಕೆ ಬಂದಿದ್ದರು. ಎಲ್ಲರೂ ಸೇರಿ ಜೀಪ್ನಲ್ಲಿ ಊರಿನತ್ತ ಹೊರಟಾಗ ದುರ್ಘಟನೆ ನಡೆದಿದೆ. ಕಲಬುರಗಿ ಕಡೆಯಿಂದ ಬರುತ್ತಿದ್ದ ಯಮಸ್ವರೂಪಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಫಜಲಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.