ಕಲಬುರಗಿ: ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಅಫಜಲಪುರ ತಾಲೂಕಾಸ್ಪತ್ರೆ ಮೇಲೆ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಡಯಾಲಿಸ್ ಯಂತ್ರಗಳು ಕಾರ್ಯ ಸ್ಥಗಿತಗೊಂಡ ಹಿನ್ನೆಲೆ ನಾಲ್ವರು ರೋಗಿಗಳು ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆಸ್ಪತ್ರೆ ಬೇಜವಾಬ್ದಾರಿಗೆ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಮಾನವನ ದೇಹಕ್ಕೆ ಕಿಡ್ನಿ ಅತ್ಯಗತ್ಯ ಅಂಗ, ಕಿಡ್ನಿ ದೀರ್ಘಕಾಲದವರೆಗೆ ಕಾರ್ಯ ನಿರ್ವಹಿಸದಿದ್ರೆ ಶರೀರದಲ್ಲಿರುವ ನಿರುಪಯುಕ್ತ ಪದಾರ್ಥಗಳು ಮತ್ತು ಬೇಡವಾದ ನೀರಿನ ಅಂಶ ಬೆಳೆದು ಸಾವು ಬರಬಹುದು. ಕಿಡ್ನಿ ಸಮಸ್ಯೆ ಇರುವ ರೋಗಿಗಳು ಬದುಕಬೇಕಾದ್ರೆ ಡಯಾಲಿಸಿಸ್ ಯಂತ್ರದ ಮೂಲಕ ನಿರಂತರ ರಕ್ತ ಶುದ್ಧೀಕರಣ ಮಾಡಿಸಿಕೊಳ್ಳಬೇಕು. ರಕ್ತ ಶುದ್ಧೀಕರಣ ಮಾಡದಿದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ. ಆದ್ರೆ, ಅಫಜಲಪೂರ ತಾಲೂಕಾಸ್ಪತ್ರೆಯಲ್ಲಿ ಇರುವ ಎರಡು ಡಯಾಲಿಸಿಸ್ ಯಂತ್ರಗಳು ಕೆಟ್ಟು ನಿಂತಿವೆ. ತಾಲೂಕಿನ 16 ರೋಗಿಗಳು ಇದೇ ಆಸ್ಪತ್ರೆಯ ಡಯಾಲಿಸಿಸ್ ಯಂತ್ರದ ಮೇಲೆ ಅವಲಂಬಿತರಾಗಿದ್ದರು. ಆದ್ರೆ ಯಂತ್ರ ಕೆಟ್ಟಿದ್ದರಿಂದ ಪ್ರತಿಬಾರಿ ಸಾವಿರಾರು ರೂಪಾಯಿ ಖರ್ಚು ಮಾಡಿ ವಾರಕ್ಕೆ ಮೂರುಬಾರಿ ರಕ್ತ ಶುದ್ಧೀಕರಣ ಮಾಡಿಸಿಕೊಳ್ಳಲು ಆಗದ ಬಡ ರೋಗಿಗಳು ನರಳಿ ಪ್ರಾಣ ಬಿಡುತ್ತಿದ್ದಾರೆ. ಕಳೆದ ಮೂರು ದಿನದಲ್ಲಿ ನಾಲ್ವರು ರೋಗಿಗಳು ಉಸಿರು ಚೆಲ್ಲಿದ್ದಾರೆ. ಆಸ್ಪತ್ರೆಯ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಇದೇ ಆಸ್ಪತ್ರೆಯಲ್ಲಿ ಆರು ಜನ ರೋಗಿಗಳು ಸಾವನ್ನಪ್ಪಿ, ಇಡೀ ರಾಜ್ಯದಲ್ಲಿ ವ್ಯಾಪಕ ಚರ್ಚೆ ಕೂಡಾ ಆಗಿತ್ತು. ಈಗ ಆಸ್ಪತ್ರೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: 'ಅವನಿ' ಚಂಡಮಾರುತದ ಎಫೆಕ್ಟ್.. ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ