ಕಲಬುರಗಿ : ತೊಗರಿ ನಾಡಿನಲ್ಲಿ ತೊಗರಿ ಬೆಳೆದ ರೈತರು ನೆಟೆ ರೋಗದಿಂದ ಬೆಳೆಗಳನ್ನು ಕಳೆದುಕೊಂಡಿದ್ದು, ಈ ಹಿನ್ನೆಲೆ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಕಲಬುರಗಿ ಬಂದ್ ನಡೆಸಿದವು. ಈ ಸಂದರ್ಭದಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ನಷ್ಟ ಪರಿಹಾರ ನೀಡುವಂತೆ ರೈತಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದವು.
ಕಲಬುರಗಿ ಬಂದ್ಗೆ ರೈತ ಸಂಘಟನೆಗಳ ಕರೆ: ತೊಗರಿ ಬೆಳೆಯನ್ನು ನಂಬಿರುವ ರೈತರ ಕಣ್ಣೀರ ಕಥೆಯನ್ನು ಯಾರೂ ಕೇಳೋರಿಲ್ಲ. ಒಂದು ಕಡೆ ಅತಿವೃಷ್ಠಿಯಿಂದ ಬೆಳೆ ಕಳೆದುಕೊಂಡ ರೈತರು ಈಗ ನೆಟೆ ರೋಗದಿಂದ ಬೆಳೆ ಕಳೆದುಕೊಂಡು ಕಣ್ಣೀರು ಹಾಕುವಂತಾಗಿದೆ. ನೆಟೆ ರೋಗದಿಂದಾಗಿ ತೊಗರಿ ಬೆಳೆದ ರೈತರು ಮತ್ತೆ ಸಂಕಷ್ಟದಲ್ಲಿದ್ದು, ರೈತರ ಪರಿಹಾರಕ್ಕೆ ಇಂದು ರೈತ ಸಂಘಟನೆಗಳು ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ, ರೈತರ ಪರ ಎಂದು ಹೇಳಿಕೊಂಡು ಜನತೆಗೆ ವಂಚನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೇವಲ ಬಂಡವಾಳ ಶಾಹಿಯಾಗಿ ವರ್ತಿಸುತ್ತಿದೆ. ನರೇಂದ್ರ ಮೋದಿ ಕೇವಲ ಅದಾನಿ ಅಂಬಾನಿ ಅವರಿಗೆ ಲಾಭ ತರುವಂತಹ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಜನವರಿ 19 ರಂದು ಕಲಬುರಗಿಗೆ ಆಗಮಿಸುವ ಪ್ರಧಾನಿ ಮೋದಿ ಅವರೇ ತೊಗರಿ ರೈತರ ಬೆಳೆಗೆ ಪರಿಹಾರ ಎಂದು ನೀಡುತ್ತೀರಿ ಎಂದು ಆಕ್ರೋಶ ಹೊರ ಹಾಕಿದರು.
70 ಸಾವಿರ ಹೆಕ್ಟೇರ್ ತೊಗರಿ ಬೆಳೆ ಹಾನಿ :ಕಲಬುರಗಿ ಜಿಲ್ಲೆಯು ತೊಗರಿ ಕಣಜ ಎಂದು ಪ್ರಸಿದ್ಧಿ ಪಡೆದಿದೆ. ಕಳೆದ ಕೆಲ ತಿಂಗಳಿಂದ ಉಂಟಾದ ಅತಿವೃಷ್ಠಿಯಿಂದಾಗಿ ರೈತರು ತಾವು ಬೆಳೆದ ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಕಲಬುರಗಿಯ ರೈತರು ತಾವು ಬೆಳೆದ ತೊಗರಿ ಬೆಳೆಗೆ ನೆಟೆ ರೋಗ ತಗುಲಿ ಬೆಳೆ ಸಂಪೂರ್ಣ ನಾಶವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ತೊಗರಿಗೆ ಬಾಧಿಸಿದ ನಟೆರೋಗದಿಂದ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದ ತೊಗರಿ ಬೆಳೆಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.