ಕಲಬುರಗಿ :ಬಿಜೆಪಿ ಪಕ್ಷವನ್ನು ಬಿಜೆಪಿ ಎನ್ನುವ ಬದಲಾಗಿ ಮೋದಿ ಪಕ್ಷ ಎಂದು ಕರೆಯೋದು ಸೂಕ್ತ. ಯಾಕಂದ್ರೆ, ಪಕ್ಷದ ಹೆಸರಿನಲ್ಲಿ ಚುನಾವಣೆ ಮಾಡುವ ಬದಲು ಮೋದಿ ಹೆಸರಿನಲ್ಲಿ ಚುನಾವಣೆ ಮಾಡ್ತಿದ್ದಾರೆ. ಹಾಗಾಗಿ, ಮೋದಿ ಪಾರ್ಟಿ ಅಂತಾ ನಾನು ಕರೆಯುತ್ತೇನೆ ಎಂದು ಕಲಬುರಗಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಬಿಜೆಪಿಯನ್ನು ಕುಟುಕಿದ್ದಾರೆ.
ಒಬ್ಬ ವ್ಯಕ್ತಿಯ ಸಕ್ಸಸ್ನಲ್ಲಿ ಬಿಜೆಪಿ ಪಾರ್ಟಿ ನಡೆಯುತ್ತಿದೆ. ಆದ್ರೆ, ಮುಂದೇನು ಆಗುತ್ತೋ ಅದು ನನಗೆ ಗೋತ್ತಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ವಿರುದ್ಧ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ವಾಗ್ದಾಳಿ ನಡೆಸಿರುವುದು.. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ಶಕ್ತಿ ಹೀನವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ದೇಶದ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇದಕ್ಕೆ ಕಾರಣ ಏನು? ಯಾರು? ಅಂತಾ ಅವರೆ ಹುಡುಕಿಕೊಳ್ಳಬೇಕು.
ಮುಂದಿನ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಬೆಳೆಯುತ್ತೆ ಅನ್ನೋದು ಈಗಲೇ ಹೇಳುವುದಕ್ಕೆ ಆಗೋದಿಲ್ಲ. ಎರಡೂ ಪಕ್ಷದವರು 2023ಕ್ಕೆ ಜೆಡಿಎಸ್ ಸಂಪೂರ್ಣ ನಾಶ ಮಾಡುವುದಾಗಿ ಹೇಳ್ತಿದ್ದಾರೆ. ಆದ್ರೆ, ಮತದಾರರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಇದನ್ನೂ ಓದಿ: ಮುಂದಿನ 4-6 ವಾರ ರಾಜ್ಯದ ಜನರು ಎಚ್ಚರದಿಂದ ಇರಬೇಕು : ಸಚಿವ ಸುಧಾಕರ್
ಇನ್ನು ರಾಮನಗರದಲ್ಲಿ ನಡೆದ ಸಚಿವ ಹಾಗೂ ಸಂಸದರ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದೇವೇಗೌಡ್ರು, ಎರಡು ಪಕ್ಷದ ನಾಯಕರು ಈ ಮಟ್ಟಕ್ಕೆ ಇಳಿಯಬಾರದು. ಇಂತಹ ಘಟನೆಗಳು ಆಗಬಾರದು ಎಂದರು.
ಕೊರೊನಾ ಸಮಯದಲ್ಲಿ ಕಾಂಗ್ರೆಸ್ ಮೇಕೆದಾಟು ಹೋರಾಟ :ಮೇಕೆದಾಟು ಬಗ್ಗೆ ಕಾಂಗ್ರೆಸ್ ಹೋರಾಟ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ನಲ್ಲಿ ದಿನಾಂಕ ನಿಗದಿ ಮಾಡಿದ್ದಾರೆ ಅಂತಾ ಕೇಳಿದ್ದೀನಿ. ಇಂತಹ ಸಂದರ್ಭದಲ್ಲಿ ಹೋರಾಟ ಸರಿಯಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಗಡ್ಕರಿ ಪ್ರಾವಿಜನಲ್ ಕ್ಲಿಯರೆನ್ಸ್ ಮಾಡಿದ್ರು.
ಅದಾದ ಮೇಲೆ ತಮಿಳುನಾಡಿನವರು ಕ್ಯಾತೆ ತೆಗೆದಿದ್ದರು. ನಾಲ್ಕು ರಾಜ್ಯಗಳ ನಿಲುವು ತೆಗೆದುಕೊಂಡು ಅಂತಿಮ ಜಡ್ಜ್‌ಮೆಂಟ್ ಬರಲಿದೆ. ಅದು ಏನು ಬರುತ್ತೆ ಅನ್ನೋದು ಕಾಯ್ದು ನೋಡಿ ಮುಂದಿನ ಕಾರ್ಯಯೋಜನೆ ರೂಪಿಸಬೇಕು.
ಕೊರೊನಾ ಸಂದರ್ಭದಲ್ಲಿ ಹೋರಾಟ ಎಷ್ಟು ಯಶಸ್ವಿಯಾಗುತ್ತೋ ಗೊತ್ತಿಲ್ಲ. ಈ ಹೋರಾಟದ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಕಳೆದೋಗಿರುವ ವರ್ಚಸ್ಸು ಮರಳಿ ಪಡೆಯುವುದಕ್ಕೆ ಪ್ರಯತ್ನ ಮಾಡ್ತಿದ್ರೆ, ಕಾಂಗ್ರೆಸ್ನನ್ನು ಮುಗಿಸಬೇಕು ಅಂತಾ ಬಿಜೆಪಿಯವರು ನಿಂತಿದ್ದಾರೆ ಎಂದರು.
ಸಿದ್ದರಾಮಯ್ಯಗೆ ದೇವೇಗೌಡ ಪ್ರಶ್ನೆ :ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದಾಗ ಏನ್ ಆಯ್ತು?, ನಾವು ಬಿಜೆಪಿಯ ಬಿ ಟೀಮ್ ಅಂತಾ ಆರು ತಿಂಗಳ ಕಾಲ ಹೇಳಿದ್ರು. ಪರಿಣಾಮ 130ಕ್ಕಿದ್ದ ಕಾಂಗ್ರೆಸ್ 78ಕ್ಕೆ ಬಂದು ನಿಂತಿದೆ. ಇವರ ಹೋರಾಟದಿಂದ ಫಲ ಸಿಗುತ್ತೆ ಅಂದ್ರೆ ಅದು ಅಷ್ಟು ಸುಲಭವಲ್ಲ. ಜೆಡಿಎಸ್ಗೂ ಶೇ.20ರಷ್ಟು ಮತಗಳು ಇವೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.