ಕಲಬುರಗಿ:ಮೇ ತಿಂಗಳಲ್ಲೇ ಹವಾಮಾನ ಇಲಾಖೆ ಮಳೆ ಕೊರತೆ ಬಗ್ಗೆ ವರದಿ ಕೊಟ್ಟಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಗಮನ ಹರಿಸಲಿಲ್ಲ. ಹವಾಮಾನ ಇಲಾಖೆ ವರದಿ ಕೊಟ್ಟ ತಕ್ಷಣವೇ ಕಾವೇರಿ ನೀರು ನಿರ್ವಹಣಾ ಮಂಡಳಿ ಬಳಿ ಸರ್ಕಾರ ಹೋಗಿದ್ರೆ ಇಷ್ಟೊಂದು ಸಮಸ್ಯೆ ತಲೆದೋರುತ್ತಿರಲಿಲ್ಲ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ, ಶಾಸಕ ಜಿ ಟಿ ದೇವೇಗೌಡ ಹೇಳಿದ್ದಾರೆ.
ಕಾವೇರಿ ನೀರಿನ ವಿಚಾರದಲ್ಲಿ ಮಾಧ್ಯಮಗಳಿಗೆ ಇರುವ ಕಾಳಜಿ ಸರ್ಕಾರಕ್ಕೆ ಇಲ್ಲದಂತಾಗಿದೆ. ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ವಿಫಲ ಆಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ವಾಸ್ತವಾಂಶ ತಿಳಿಸಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ತಮಿಳುನಾಡು ಸಿಎಂ ಸ್ಟಾಲಿನ್ ಜೊತೆ ಸೇರಿಕೊಂಡು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ತಮಿಳುನಾಡು ಹೇಳಿದ ಹಾಗೆ ಕಾವೇರಿ ನೀರು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ರಾಜಕೀಯಗೋಸ್ಕರ ರಾಜ್ಯದ ಹಿತ ಬಲಿಕೊಡ್ತಿದ್ದಾರೆ. INDIA ಅಧಿಕಾರಕ್ಕೆ ತರಲು ರಾಜ್ಯದ ಜನರನ್ನ ಬಲಿ ಕೊಡ್ತಿದ್ದಾರೆ. ರಾಜ್ಯದ ಹಿತವನ್ನು ಬಲಿ ಕೊಟ್ಟು ಲೋಕಸಭೆ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ವೈರಿಗಳ ಥರ ಇರಬೇಕು ಅನ್ನೋ ವಿಚಾರ ಕಾಂಗ್ರೆಸ್ಗೆ ಇದೆ. ಆದ್ರೆ ಕಾಂಗ್ರೆಸ್ ಸಚಿವರೇ ಮೂರು ಡಿಸಿಎಂ, ಐದು ಡಿಸಿಎಂ ಅಂತ ಕಿತ್ತಾಡ್ಕೋತ್ತಿದ್ದಾರೆ. ಮೂರು ಡಿಸಿಎಂ, ಐದು ಡಿಸಿಎಂ ಬೇಕು ಅನ್ನೋ ಈ ರೀತಿ ಸರ್ಕಾರ ಯಾವತ್ತಾದ್ರು ನೋಡಿದ್ದಿರಾ? ಈ ಮುಂಚೆ ಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿದ್ರು. ಈಗ ಅದೇ ಸಿದ್ದರಾಮಯ್ಯ ವಿಫಲವಾದ ಮುಖ್ಯಮಂತ್ರಿ ಆಗೋಗಿ ಬಿಟ್ಟಿರಲ್ಲ ಎಂದು ಕಿಚಾಯಿಸಿದರು.