ಕಲಬುರಗಿ: ಆರ್ಥಿಕತೆ ದಿವಾಳಿಯಿಂದಾಗಿ ರಾಜ್ಯ ಸರ್ಕಾರ ಐಸಿಯುನಲ್ಲಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೋಮಾಕ್ಕೆ ಜಾರಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೆಡೆಗಿನ ನಿರ್ಲಕ್ಷ್ಯಧೋರಣೆ ಖಂಡಿಸಿದ ಮಾಜಿ ಸಚಿವ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಮೈನಸ್ ಶೇ.70 ರಷ್ಟಾಗಿದೆ. ಕೆ.ಕೆ.ಆರ್.ಡಿ.ಬಿ.ಗೆ ಬರಬೇಕಾದ ಅನುದಾನವನ್ನು ಇನ್ನೂ ನೀಡಿಲ್ಲ. ಆದ್ದರಿಂದ ಯಾವುದೇ ಕಾಮಗಾರಿಗಳೂ ನಡೆಯುತ್ತಿಲ್ಲ. ಈ ಬಗ್ಗೆ ಬಿಜೆಪಿ ಶಾಸಕರು ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರಕ್ಕೆ ಪ್ರಶ್ನಿಸುವ ಧೈರ್ಯ ಇಲ್ಲದಿದ್ದರೆ ನಮ್ಮನ್ನು ಕರೆದುಕೊಂಡು ಹೋಗಿ ನಮಗೆ ಯಾರ ಭಯವೂ ಇಲ್ಲ. ಈ ಭಾಗದ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಧೈರ್ಯದಿಂದ ಹೇಳುವ ತಾಕತ್ತು ನಮಗಿದೆ. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದ ಕೂಡಲೇ ಕಲ್ಯಾಣವಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಈ ವರ್ಷದ ನವೆಂಬರ್ ತಿಂಗಳವರೆಗೆ 1,500 ಕೋಟಿ ರೂಪಾಯಿಗಳ ಪೈಕಿ ರಾಜ್ಯ ಸರ್ಕಾರ ಕೇವಲ 533 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಪೈಕಿ ಖರ್ಚಾಗಿರುವುದು ಮಾತ್ರ ಕೇವಲ 48 ಕೋಟಿ ರೂಪಾಯಿ. ಶೇ.78 ರಷ್ಟು ಖರ್ಚು ಮಾಡಿಲ್ಲ ಅಂದ್ರೆ ಮುಂದಿನ ಕಂತುಗಳನ್ನು ಬಿಡುಗಡೆ ಮಾಡೋದಿಲ್ಲ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪತ್ರದ ಮೂಲಕ ತಿಳಿಸಿದ್ದಾರೆ.
ಕೆ.ಕೆ.ಆರ್.ಡಿ.ಬಿ ಗೆ ಸಮಿತಿ ರಚನೆಯಲ್ಲಿ ನಿರ್ಲಕ್ಷ್ಯ ಧೋರಣೆ:
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕೇವಲ ಅಧ್ಯಕ್ಷರನ್ನು ಮಾತ್ರ ನೇಮಕ ಮಾಡಲಾಗಿದೆ. ಸಮಿತಿಯನ್ನೇ ನೇಮಕ ಮಾಡಿಲ್ಲ ಅಂದಮೇಲೆ ಅಭಿವೃದ್ಧಿಯ ಮಾತೆಲ್ಲಿ?. ಇದರಿಂದಾಗಿಯೇ ಕೆ.ಕೆ.ಆರ್.ಡಿ.ಬಿ ಕೋಮಾ ಸ್ಥಿತಿಯಲ್ಲಿದೆ. ಇದನ್ನು ಸರಿಪಡಿಸಲು ಸಿಎಂ ಎಂಬ ವೈದ್ಯರ ಬಳಿ ಹೋಗಬೇಕಿದೆ. ವೈದ್ಯರ ಬಳಿ ಕರೆದೊಯ್ಯಲು ನಾವು ಸಿದ್ದರಿದ್ದೇವೆ. ಆದರೆ, ಆಡಳಿತ ಪಕ್ಷದ ಶಾಸಕರೇ ಬರೋಕೆ ಹೆದರುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮೇಲೆ ತೀವ್ರ ಪರಿಣಾಮವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.