ಕಲಬುರಗಿ: ಚಿತ್ತಾಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವಾಲ್ಮೀಕಿ ನಾಯಕ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
72 ವರ್ಷದ ವಾಲ್ಮೀಕಿ ನಾಯಕ ಬೆಂಗಳೂರಿನಿಂದ ರೈಲು ಮುಖಾಂತರ ಮರಳುವಾಗ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 8.30 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ವಾಡಿ ಪಟ್ಟಣದಲ್ಲಿ ಜನಿಸಿದ ವಾಲ್ಮೀಕಿ ನಾಯಕ, ವಾಡಿ ಎಸಿಸಿ ಕಂಪನಿಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ರಾಜಕೀಯ ಪ್ರವೇಶ ಮಾಡಿದ ಅವರು ಮೊದಲಿಗೆ 1987 ರಲ್ಲಿ ವಾಡಿ ಪಟ್ಟಣ ಪಂಚಾಯಿತಿಯ ಪ್ರಧಾನರಾಗಿ ಸೇವೆ ಸಲ್ಲಿಸಿ ಸರ್ಕಾರದಿಂದ ಉತ್ತಮ ಸೇವಕರೆಂದು ಪ್ರಶಸ್ತಿಗೆ ಭಾಜನರಾಗಿದ್ದರು.
1999 ರಲ್ಲಿ ಶಹಾಬಾದ ಮೀಸಲು ಮತಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಅವರು ಸೋಲು ಒಪ್ಪಿಕೊಂಡಿದ್ದರು. 2008 ರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ನಂತರ ಮಲ್ಲಿಕಾರ್ಜುನ ಖರ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಆಯ್ಕೆಯಾದ ನಂತರ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ನಾಯಕ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ವಿರುದ್ಧ ಗೆಲವು ಸಾಧಿಸಿದ್ದರು. ನಂತರದ ಎರಡು ಚುನಾವಣೆಯಲ್ಲಿ ಸೋತಿದ್ದರು.
ಪಕ್ಷದಲ್ಲಿ ಕಡೆಗಣನೆಗೆ ಕಣ್ಣೀರು:ಬಿಜೆಪಿಯಲ್ಲಿ ಪಕ್ಷನಿಷ್ಠರಾಗಿ ತಮ್ಮ ಅಸ್ತಿತ್ವ ಕಾಯ್ದುಕೊಂಡಿದ್ದ ವಾಲ್ಮೀಕಿ ನಾಯಕ, ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗಲೂ ಪಕ್ಷ ತೊರೆಯದೇ ಬಿಜೆಪಿ ಪಕ್ಷದಲ್ಲೆ ಇದ್ದು ಪಕ್ಷ ನಿಷ್ಠೆ ತೋರಿದರು. ಇತ್ತಿಚಿಗೆ ಮಾಧ್ಯಮಗೋಷ್ಠಿ ಕರೆದು ಬಿಜೆಪಿ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಪಕ್ಷದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದರು.
ಪತ್ನಿ ಸೋನಾಬಾಯಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬೆಂಬಲಿಗರನ್ನು ವಾಲ್ಮೀಕಿ ನಾಯಕ ಅಗಲಿದ್ದಾರೆ. ಶನಿವಾರ ಮಧ್ಯಾಹ್ನ 1.00 ಗಂಟೆಗೆ ವಾಡಿ ಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶಾಸಕ ಪ್ರಿಯಾಂಕ್ ಖರ್ಗೆ ಕಂಬನಿ: ವಾಲ್ಮಿಕಿ ನಾಯಕ ಅವರ ಅಕಾಲಿಕ ನಿಧನಕ್ಕೆ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ವಾಲ್ಮೀಕಿ ನಾಯಕ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಇದನ್ನು ಈಗಲೂ ನಂಬಲಾಗುತ್ತಿಲ್ಲ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಶ್ರೀಯುತರ ನಿಧನದ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.