ಕಲಬುರಗಿ:ಮಹಾರಾಷ್ಟ್ರದಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಭೀಮಾ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಜಿಲ್ಲೆಯಲ್ಲಿ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನ ಊರು ಬಿಟ್ಟು ತೆರಳುತ್ತಿದ್ದಾರೆ.
ಭೀಮಾ ನದಿ ನೀರಿನ ಪ್ರವಾಹ: ಮನೆ ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ಹೊರಟ ಗ್ರಾಮಸ್ಥರು
ಭೀಮಾ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಕಲಬುರಗಿ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತಗೊಂಡಿವೆ. ವೀರ್ ಜಲಾಶಯದಿಂದ ಸೊನ್ನ ಬ್ಯಾರೇಜ್ಗೆ 2 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕಲಬುರಗಿ, ಅಫಜಲಪುರ, ಜೇವರ್ಗಿ, ಚಿತಾಪುರ ತಾಲೂಕಿನ ಹಲವು ಗ್ರಾಮದ ಜನರು ಮನೆ ಖಾಲಿ ಮಾಡುತ್ತಿದ್ದಾರೆ. ಅಫಜಲಪುರ ತಾಲೂಕಿನ ಜೇವರ್ಗಿ ಕೆ, ಜೇವರ್ಗಿ ಬಿ, ದಿಗ್ಸಂಗ್, ತೇಲೂನಿ, ಶಿರವಾಳ, ಬಂಕಲಗಾ, ನಂದರ್ಗಾ ಗ್ರಾಮದ ಜನರು ದನಕರುಗಳ ಸಮೇತ ಊರು ಬಿಟ್ಟಿದ್ದಾರೆ. ಈಗಾಗಲೇ ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯದಿಂದ ಸೊನ್ನ ಬ್ಯಾರೇಜ್ಗೆ 2 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಸೊನ್ನ ಬ್ಯಾರೇಜ್ನಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಭೀಮಾ ನದಿಗೆ 2,23,000 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಮಹಾರಾಷ್ಟ್ರದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಇದ್ದು, ಮತ್ತಷ್ಟು ಗ್ರಾಮಗಳು ಜಲ ಕಂಟಕಕ್ಕೆ ಒಳಗಾಗಲಿವೆ.