ಕಲಬುರಗಿ: ಮಹಾರಾಷ್ಟ್ರದ ಉಜನಿ ವೀರ ಭಟ್ಕರ ಜಲಾಶಯಗಳ ಪ್ರದೇಶದಲ್ಲಿ ವ್ಯಾಪಕ ಮಳೆ ಬೀಳುತ್ತಿದ್ದು ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಉಂಟು ಮಾಡಿದೆ.
ಉಜನಿ ಜಲಾಶಯದಿಂದ 60 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ. ಇದು ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ನಲ್ಲಿ ನೀರಿನ ಪ್ರಮಾಣ ಹೆಚ್ಚಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರೇಜ್ನಿಂದ 13 ಗೇಟ್ಗಳ ಮೂಲಕ 1 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಭೀಮಾ ಏತ ನೀರಾವರಿ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದರು.
ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಶ್ರೀ ಯಲ್ಲಮ್ಮದೇವಿ ದೇವಸ್ಥಾನದ ಸುತ್ತಲೂ ನೀರು ಆವರಿಸಿಕೊಂಡಿದೆ. ನದಿ ಮಧ್ಯದಲ್ಲಿರುವ ಯಲ್ಲಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ದೇವಸ್ಥಾನದ ಸೇತುವೆ ಪ್ರವೇಶ ದ್ವಾರವನ್ನು ಯಲ್ಲಮ್ಮ ದೇವಿ ಟ್ರಸ್ಟ್ ಕಮಿಟಿಯವರು ಬಂದ್ ಮಾಡಿದ್ದಾರೆ. ಭಾನುವಾರ ಪೌರ್ಣಮಿ, ಬೆಳಗ್ಗೆ 6 ಗಂಟೆಯಿಂದಲೇ ದರ್ಶನಕ್ಕೆ ಬರುವ ಭಕ್ತರ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಭಕ್ತರಿಗೆ ಹೊರಗಡೆಯಿಂದಲೇ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಣ್ಣೂರ-ಭುಯ್ಯಾರ ಗ್ರಾಮದ ಮೂಲಕ ಇಂಡಿಗೆ ಹೋಗುವ ರಸ್ತೆಯ ಮಾರ್ಗ ಮಧ್ಯದಲ್ಲಿರುವ ಭುಯ್ಯಾರ ಬ್ಯಾರೇಜ್ ಮೇಲೆ ದೊಡ್ಡ ಪ್ರಮಾಣದ ನೀರು ಹರಿಯುತ್ತಿದ್ದು, ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನೊಂದೆಡೆ, ಘತ್ತರಗಾ ಗ್ರಾಮದ ಸೇತುವೆ ಮೇಲೂ ನೀರು ಬಂದಿದ್ದು ಅಫಜಲ್ಪುರ- ಘತ್ತರಗಾ ಮಾರ್ಗವಾಗಿ, ಸಿಂದಗಿ ವಿಜಯಪುರಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭೀಮಾ ನದಿ ದಡದಲ್ಲಿರುವ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ಕಬ್ಬು, ತೊಗರಿ, ಹತ್ತಿ, ಹೆಸರು, ಉದ್ದು ಸೇರಿದಂತೆ ಹಲವಾರು ಬೆಳೆಗಳು ಜಲಾವೃತವಾಗಿವೆ.
ಇದನ್ನೂ ಓದಿ:ವಿಜಯಪುರದಲ್ಲಿ ಭಾರಿ ಮಳೆ.. ಚಿತ್ರಮಂದಿರ ಆವರಣಕ್ಕೆ ನುಗ್ಗಿದ ನೀರು