ಕಲಬುರಗಿ: ಕೇವಲ ಒಂದು ಸಿಗರೇಟ್ ದುಡ್ಡು ಕೇಳಿದ ವಿಚಾರಕ್ಕೆ ಆರಂಭಗೊಂಡ ಜಗಳದಲ್ಲಿ ಎರಡು ವರ್ಷದ ಮಗುವಿನ ಪ್ರಾಣ ತೆಗೆದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿಯ ಫಿರದೋಸ್ ಕಾಲೋನಿಯ ನವಾಜ್ ಕೊಲೆ ಮಾಡಿರುವ ಪ್ರಮುಖ ಆರೋಪಿ.
ಈತನಿಗೆ ಸಾಥ್ ನೀಡಿದ ಸದ್ದಾಮ್, ಅನಿಸ್ ಸೊಹೆಲ್, ಜಹಿರೊದ್ದೀನ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಬಂಧಿತರು. ಎಸಿಪಿ ಇನಾಮದಾರ್ ಮಾರ್ಗದರ್ಶನದಲ್ಲಿ ವಿವಿ ಠಾಣೆಯ ಇನ್ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಗಳು 2021ರ ಡಿಸೆಂಬರ್ 6 ಮತ್ತು 7ರ ನಡುವೆ ಫಿರದೋಸ್ ಕಾಲೋನಿಯ ಮುಜಮಿಲ್ ಎಂಬ ಎರಡು ವರ್ಷದ ಮಗುವನ್ನು ಅಪಹರಿಸಿದ್ದಲ್ಲದೇ ರಾತ್ರಿಯಿಡೀ ಹಿಂಸೆ ನೀಡಿದ್ದರು. ಬಳಿಕ ಮಗುವಿನ ಮನೆ ಹತ್ತಿರದಲ್ಲಿಯೇ ಕಟ್ಟಡ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಮರಳಿನಲ್ಲಿ ಆ ಮಗುವನ್ನು ಹೂತು ಆರೋಪಿಗಳು ಪರಾರಿಯಾಗಿದ್ದರು.
ಪ್ರಕರಣದ ಹಿನ್ನೆಲೆ?:ಕೊಲೆಯಾದ ಎರಡು ವರ್ಷದ ಮಗು ಮುಜಮಿಲ್ ತಂದೆ ನಿಸಾರ್ ಅಹ್ಮದ್ ತಮ್ಮ ಮನೆ ಹತ್ತಿರ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ಪ್ರಮುಖ ಆರೋಪಿ ನವಾಜ್ ಇವರ ಅಂಗಡಿಯಲ್ಲಿ ಸಿಗರೇಟ್ಗಾಗಿ ಉದ್ರಿ(ಸಾಲ) ಮಾಡಿದ್ದ. ನಂತರ ಹಣ ನೀಡುವ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು.