ಕಲಬುರಗಿ ಸೆಂಟ್ರಲ್ ವಿವಿಯಲ್ಲಿ ಅಗ್ನಿ ಅವಘಡ ಕಲಬುರಗಿ: ಹೊರವಲಯದ ಕಡಗಂಚಿಯಲ್ಲಿರುವ ಸೆಂಟ್ರಲ್ ವಿಶ್ವವಿದ್ಯಾಲಯ ಆವರಣದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಗಿಡ, ಮರ, ಪ್ರಾಣಿ, ಪಕ್ಷಿಗಳು ಬೆಂಕಿಗಾಹುತಿ ಆಗಿರುವ ಘಟನೆ ನಡೆದಿದೆ. ವಿಶ್ವವಿದ್ಯಾಲಯ ಆವರಣದಲ್ಲಿರುವ ಕೆರೆ ಹತ್ತಿರದ ಒಣಗಿದ ಹುಲ್ಲಿಗೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು ನೋಡನೋಡುತ್ತಿದ್ದಂತೆ ಬೆಂಕಿ ವಿಸ್ತರಿಸಿಕೊಂಡು ಅಪರೂಪದ ಸಸ್ಯಗಳು, ಮರಗಳು, ಪ್ರಾಣಿ ಪಕ್ಷಿಗಳು ಸುಟ್ಟು ಕರಕಲಾಗಿವೆ.
ಉದ್ದೇಶಪೂರ್ವಕವಾಗಿ ಕಿಡಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ. ಕಳೆದ ಮೂರು ದಿನಗಳಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಇಂದು ಏಕಕಾಲಕ್ಕೆ ಮೂರು ಕಡೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಬೆಂಕಿ ಕೆನ್ನಾಲಿಗೆ ಚಾಚಿಕೊಂಡು ಧಗಧಗಿಸಿದೆ. ಬೆಂಕಿಯಿಂದ ದಟ್ಟವಾದ ಹೊಗೆ ಆವರಿಸಿದೆ. ವಿವಿ ವಿದ್ಯಾರ್ಥಿಗಳು, ಪಕ್ಕದ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ, ಬೆಂಕಿ ನಂದಿಸುವ ಕೆಲಸ ಪ್ರಗತಿಯಲ್ಲಿದೆ. ತಕ್ಷಣ ಅರಣ್ಯಾಧಿಕಾರಿಗಳು, ಪೊಲೀಸರಿಗೆ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಯುಕೆ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾಲಯ ಆವರಣದ ವಸತಿ ನಿಲಯಗಳು ಹಾಗೂ ಕೆರೆಯ ಹತ್ತಿರ ಮನುಷ್ಯನ ಟೊಂಕದ ಎತ್ತರದಷ್ಟು ಒಣಹುಲ್ಲು ಬೆಳೆದು ನಿಂತಿದೆ. ಜೆಸಿಬಿ ಹಾಗೂ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಒಣಹುಲ್ಲು ಕತ್ತರಿಸಲಾಗುತ್ತಿದೆ. ಆದರೆ, ಕೆಲವು ಕಿಡಿಗೇಡಿಗಳು ಮೂರು ದಿನಗಳಿಂದ ಬೆಂಕಿ ಹಚ್ಚುತ್ತಿದ್ದಾರೆ. ಬೆಂಕಿಯಿಂದಾಗಿ ಸೋಲಾರ್ ಪ್ಲಾಂಟ್, ಕಾಂಪೌಂಡ್, ಕೆರೆ ಸಮೀಪದ ಗಿಡ ಮರಗಳು ಸುಟ್ಟಿವೆ. ನಿರ್ಭಯವಾಗಿ ಹುಲ್ಲಿನ ನಡುವೆ ವಾಸವಾಗಿದ್ದ ಹುಳು ಹುಪ್ಪಟೆಗಳು, ಕಪ್ಪೆ ಹಾವುಗಳು, ಪಕ್ಷಿ ಚಿಟ್ಟೆಗಳು ಬೆಂಕಿಗೆ ಆಹುತಿಯಾಗಿರುವುದು ಪಕ್ಷಿ-ಪ್ರಾಣಿಪ್ರೀಯರಲ್ಲಿ ಬೇಸರ ಮೂಡಿಸಿದೆ.
ಮೇಲ್ನೋಟಕ್ಕೆ ಕಿಡಗೇಡಿಗಳು ದುರುದ್ದೇಶದಿಂದ ಬೆಂಕಿ ಹಚ್ಚಿರುವುದು ಗೊತ್ತಾಗುತ್ತಿದೆ. ಆಗಾಗ ವಿವಿ ಆವರಣದಲ್ಲಿ ಇಂತಹ ಘಟನೆಗಳು ನಡೆದು ಹೊಗೆಯಿಂದಾಗಿ ಅಕ್ಕಪಕ್ಕದ ಗ್ರಾಮದ ನಿವಾಸಿಗಳು ಹೈರಾಣಾಗುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.
ವಿದ್ಯುತ್ ಅವಘಡ:ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಮೆನೆಗೆ ಬೆಂಕಿ ತಗುಲಿ ಮನೆಯಲ್ಲಿದ್ದ ಚಿನ್ನಾಭರಣ, ಬಟ್ಟೆ ಮತ್ತು 50 ಸಾವಿರ ನಗದು ಹಣ ಸುಟ್ಟು ಕರಕಲಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಇಡೀ ಮನೆ ಸುಟ್ಟು ನಾಶವಾಗಿದೆ. ನಾವು ಎಲ್ಲಿಗೆ ಹೋಗಬೇಕು, ನಮ್ಮ ಪಾಡು ಏನು ಎಂದು ಮನೆಯೊಡತಿ ಚಂದಮ್ಮ ಕಣ್ಣೀರು ಹಾಕಿದರು. ಸ್ಥಳಕ್ಕೆ ಲೈನ್‍ಮ್ಯಾನ್ ಮತ್ತು ಜೆಇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿನ್ನಾಭರಣ ಕಳವು:ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮಾ ಇದ್ಲಾಯಿ ಗ್ರಾಮದಲ್ಲಿ ಮನೆ ಬೀಗ ಮುರಿದು 3.50 ಲಕ್ಷ ರೂಪಾಯಿ ಮೌಲ್ಯದ 7 ಗ್ರಾಂ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ. ಉಮಾಕಾಂತ ಎಂಬುವವರ ಮನೆ ಬೀಗ ಮುರಿದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಉಮಾಕಾಂತ ಕುಟುಂಬಸ್ಥರು ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ ಮನೆಯಲ್ಲಿ ಕಳ್ಳತನವಾಗಿದೆ. ಫೆ.23 ರಿಂದ 26 ರವರೆಗೆ ಅವರು ಮನೆಯಲ್ಲಿ ಇರಲಿಲ್ಲ. ಈ ಸಮಯ ಸಾಧಿಸಿ ಕಳ್ಳರು ಮನೆ ಬೀಗ ಮುರಿದು ದೋಚಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ವಿಮಾನ ನಿಲ್ದಾಣ ಆವರಣದಲ್ಲಿ ಬೆಂಕಿ: ಮರಗಳು ಅಗ್ನಿಗಾಹುತಿ