ಕಲಬುರಗಿ: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಗೆ ಓಡಾಡಿದವರ ಮೇಲೆ ಎಫ್ಐಆರ್ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಎಫ್ಐಆರ್ ದಾಖಲು: ಕಲಬುರಗಿ ಡಿಸಿ ಎಚ್ಚರಿಕೆ - Home Quarantine Rule violation
ಯಳವಾರ ಗ್ರಾಮದಲ್ಲಿ ಗರ್ಭಿಣಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ, ಬಳಿಕ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆಯಾಗಬಾರದು ಎಂದು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ.
ಸೋಂಕಿತರ ಸಂಪರ್ಕಿತರು, ಕೆಲ ರಾಜ್ಯ ಹೊರತುಪಡಿಸಿ ಇತರೆ ಹೊರ ರಾಜ್ಯಗಳಿಂದ ಬಂದವರಿಗೆ, ಗರ್ಭಿಣಿಯರು, 10 ವರ್ಷದ ಒಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟು ಅನಾರೋಗ್ಯಕ್ಕೆ ತುತ್ತಾದವರಿಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಆದ್ರೆ ಜಿಲ್ಲೆಯಲ್ಲಿ ಕೆಲವರು ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಹೊರಗಡೆ ಓಡಾಟ ಮಾಡುತ್ತಿರುವ ಹಿನ್ನೆಲೆ ಅಂತವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.
ಇತ್ತೀಚೆಗೆ ಯಡ್ರಾಮಿ ತಾಲೂಕಿನ ಯಳವಾರ ಗ್ರಾಮದಲ್ಲಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಗರ್ಭಿಣಿ ಗ್ರಾಮದಲ್ಲಿ ಓಡಾಟ ಮಾಡಿದ್ದರು. ಬಳಿಕ ಅವರಲ್ಲಿ ಕೊರೊನಾ ಪತ್ತೆಯಾಗಿ ಇಡೀ ಗ್ರಾಮವೇ ತಲ್ಲಣಗೊಳ್ಳುವಂತೆ ಆಗಿತ್ತು. ಹಾಗಾಗಿ ಜಿಲ್ಲಾಡಳಿತ ಎಫ್ಐಆರ್ ಪ್ರಕರಣ ದಾಖಲಿಸುವ ಖಡಕ್ ನಿರ್ಧಾರ ಕೈಗೊಂಡಿದೆ.