ಕಲಬುರಗಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಬಿಸಿಲೂರು ಕಲಬುರಗಿಯಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಗುತ್ತೇದಾರ್ ಸಹೋದರರ ಕಾಳಗ ಕಾವೇರುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಉಮೇದುವಾರಿಕೆ ಸಲ್ಲಿಸಿದ್ದು, ಇದೇ ಕ್ಷೇತ್ರಕ್ಕೆ ಮಾಲಿಕಯ್ಯ ಅವರ ಸಹೋದರ ಬಿಜೆಪಿಯಿಂದ ಟಿಕೆಟ್ ವಂಚಿತರಾದ ನಿತಿನ್ ಗುತ್ತೇದಾರ್ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಿತಿನ್ ಗುತ್ತೇದಾರ ಕಣಕ್ಕಿಳಿಯುತ್ತಿದ್ದಂತೆ ಅಣ್ಣ ಮಾಲಿಕಯ್ಯ ಖುದ್ದು ನಿತಿನ್ ಮನೆಗೆ ಭೇಟಿ ನೀಡಿ ಸಂಧಾನಕ್ಕೆ ಪ್ರಯತ್ನ ಮಾಡಿದ್ದಾರೆ. ತಮ್ಮನಿಗೆ ಕೈ ಮುಗಿದು ಮನೆಯಲ್ಲಿಯೇ ಬಂಡಾಯವೇಳುವುದು ಸರಿಯಲ್ಲ. ಇದೊಂದು ಬಾರಿ ನನಗೆ ಅವಕಾಶ ಕೊಡು. ಮುಂದೆ ನೀನೇ ಉತ್ತರಾಧಿಕಾರಿ ಆಗು ಎಂದು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಅಣ್ಣನ ಮಾತಿಗೆ ಸುತಾರಾಂ ಒಪ್ಪದ ನಿತಿನ್ ಸಂಧಾನದ ಸಮಯ ಮುಗಿದಿದೆ. ಈಗ ಏನಿದ್ರೂ ಸಮರದ ಸಮಯ, ಈ ಹೋರಾಟದಲ್ಲಿ ಗೆದ್ದು ಬರುವಂತೆ ಆಶೀರ್ವಾದ ಮಾಡುವಂತೆ ಅಣ್ಣ ಮಾಲಿಕಯ್ಯ ಅವರ ಕಾಲಿಗೆ ಬಿದ್ದು ಕೇಳಿಕೊಳ್ಳುವ ಮೂಲಕ ಅಣ್ಣನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ನಿತಿನ್ ಗುತ್ತೇದಾರ್ ಬೃಹತ್ ಶಕ್ತಿ ಪ್ರದರ್ಶನ :ಮೇ 10 ರಂದು ನಡೆಯಲಿರುವ ಮತದಾನಕ್ಕೆ ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಎಲ್ಲೆಡೆ ನಾಮಪತ್ರ ಸಲ್ಲಿಕೆ ಜೋರಾಗಿ ನಡೆಯುತ್ತಿದೆ. ಭೀಮಾತೀರ ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ್ ಸಹೋದರರ ನಡುವಿನ ಕಾಳಗ ಬಿರುಸಿನಿಂದ ಸಾಗಿದೆ. ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಿತಿನ್ ಗುತ್ತೇದಾರ್ ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಬೃಹತ್ ಶಕ್ತಿ ಪ್ರದರ್ಶನ ಮಾಡಿದರು. ಅಫಜಲಪುರದಲ್ಲಿನ ರ್ಯಾಲಿ ನಡೆಸಿ ತಹಶೀಲ್ದಾರ್ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಬಿರು ಬಿಸಿಲಿನಲ್ಲೂ ಸುಮಾರು ಒಂದು ಕಿಮೀದೂರ ನಡೆದ ಬೃಹತ್ ರೋಡ್ ಶೋ ನಲ್ಲಿ ಅಭಿಮಾನಿಗಳು ಜೆಸಿಬಿ ಮೂಲಕ ಹೂಮಳೆ ಗೈದು ನಿತಿನ್ಗೆ ಭಾರೀ ಬೆಂಬಲ ಸೂಚಿಸಿದರು.